ಕಾಸರಗೋಡು, ಮೇ 7: ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಾಸರಗೋಡಿನ ಕುಂಬಳೆಯಲ್ಲಿ ಗಡಿ ಉತ್ಸವ ಒಂದು ದಿನದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಧಾಕೃಷ್ಣ ಬೆಳ್ಳೂರು ಮಾತನಾಡಿ, ಕಾಸರಗೋಡಿನಲ್ಲಿ ಮೂರು ಮಾದರಿಯ ಕನ್ನಡ ಹೋರಾಟ ನಡೆದಿದೆ. ಒಂದನೆಯದು ಬೀದಿಗಿಳಿದು ನಡೆಸುವ ಹೋರಾಟ. ಅದರ ಕಾವು ಈಗ ತಗ್ಗುತ್ತಾ ಬಂದಿದೆ. ಎರಡನೆಯದು ಸಾಹಿತ್ಯಕ ಮತ್ತು ಸಾಂಸ್ಕೃತಿಕವಾದ ಹೋರಾಟ. ಅದು ಮುಂದಿನ ತಲೆಮಾರಿಗೆ ದಾಖಲೆಯಾಗಿ ಉಳಿಯುವ ಮಾದರಿಯದು. ಇಲ್ಲಿಂದ ಆರು ಸಾವಿರಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಪ್ರಕಟವಾಗಿವೆ. ಇದು ಇಲ್ಲಿ ಕನ್ನಡ ಇತ್ತು, ಇದು ಕನ್ನಡ ನಾಡಾಗಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಐತಿಹಾಸಿಕವಾದ ಸಂಗತಿ. ಮೂರನೆಯದು ಕಾನೂನಾತ್ಮಕವಾದ ಹೋರಾಟ. ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ. ಕುಣಿಕುಳ್ಳಾಯ ಮುಂತಾದವರು ಕೋರ್ಟಿಗೆ ಹೋಗಿ ಕಾಸರಗೋಡಿನ ಕನ್ನಡಿಗರಿಗೆ ಹಲವಾರು ಅನುಕೂಲತೆಗಳನ್ನು ಒದಗಿಸಿಕೊಟ್ಟಿದ್ದಾರೆ. ಈಗ ಆ ರೀತಿಯ ಹೋರಾಟವೂ ತುಸು ತಗ್ಗಿದಂತೆ ಭಾಸವಾಗುತ್ತಿದೆ.
ಸದ್ಯ ಕಾಸರಗೋಡಿನಲ್ಲಿ ಕನ್ನಡ ಉಳಿಯಬೇಕಿದ್ದರೆ ಅದನ್ನು ಸಾಂಸ್ಕೃತಿಕವಾಗಿ ಉಳಿಸಲು ಸಾಧ್ಯವಾಗಬೇಕು. ಕಾಸರಗೋಡಿನ ಜನತೆಗೆ ಸಾಂಸ್ಕೃತಿಕವಾಗಿ ಕನ್ನಡದ ಪ್ರೌಢಿಮೆಯನ್ನು ತಿಳಿಸುವಂತಹ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಬೇಕಾಗಿವೆ. ಜನಸಾಮಾನ್ಯರನ್ನು ಕನ್ನಡದ ಹೆಸರಲ್ಲಿ ಅಭಿಮಾನದಿಂದ ಒಂದುಗೂಡುವಂತೆ ಮಾಡಬೇಕಿದ್ದರೆ ಬೇರೆ ದಾರಿಗಳಿಲ್ಲ. ಕಾರ್ಯಕ್ರಮಗಳ ಆಧಿಕ್ಯ ಮತ್ತು ಸಂಘಟನೆಗಳ ಆಧಿಕ್ಯ ಎರಡೂ ಕಾಸರಗೋಡು ಕನ್ನಡ ಹೋರಾಟದ ದೃಷ್ಟಿಯಿಂದ ಕೊರತೆಗಳಾಗಿಯೇ ಕಂಡುಬರುತ್ತಿವೆ ಎಂದರು.
ಇದೇ ಸಂದರ್ಭದಲ್ಲಿ ಶಿಕ್ಷಣ ತಜ್ಞ ವಿ.ಬಿ.ಕುಳಮರ್ವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಎಸ್.ಎ.ಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ತಜ್ಞ ವಿ ಬಿ ಕುಳಮರ್ವ, ಎ.ಎಲ್.ಪಿ ಶಾಲಾ ಮುಖ್ಯೋಪಾಧ್ಯಾಯನಿ ಸ್ಮಿತಾ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ.ಸುರೇಶ್ ನೆಗಳಗುಳಿ ಉಪಸ್ಥಿತರಿದ್ದರು. ಗೀತಾ ರವರು ಪ್ರಾರ್ಥನೆಗೈದರು. ರಾಣಿ ಪುಷ್ಪಲತಾ ದೇವಿ ಸ್ವಾಗತಿಸಿ, ಗಂಗಾಧರ್ ಗಾಂಧಿ ವಂದಿಸಿದರು. ರೇಖಾ ಸುದೇಶ್ ರಾವ್ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ನಡೆದ ಕವಿಗೋಷ್ಠಿಯಲ್ಲಿ ಮೂವತ್ತಕ್ಕೂ ಹೆಚ್ಚು ಕವಿಗಳು ಕಾವ್ಯ ವಾಚನ ಮಾಡಿದರು. ತದನಂತರ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಸಾಂಸ್ಕೃತಿಕ ಉತ್ಸವ ಮನೋರಂಜನ ಕಾರ್ಯಕ್ರಮಗಳು ಜರುಗಿದವು. ಭಾಗವಹಿಸಿದ ಕವಿಗಳಿಗೆ ಹಾಗೂ ಕಲಾವಿದರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.