ಮಣಿಪಾಲ, ಮೇ 4: ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ ‘ನೇಯ್ಗೆ’- ಎರಡು ದಿನಗಳ ಉಡುಪಿ ಸೀರೆಗಳ ಕುರಿತ ಪ್ರದರ್ಶನ, ಉಪನ್ಯಾಸ, ಸಾಕ್ಷ್ಯಚಿತ್ರಗಳ ಪ್ರದರ್ಶನ ಮತ್ತು ಕಾರ್ಯಾಗಾರಗಳ ಕಾರ್ಯಕ್ರಮ ಮೇ 5 ಮತ್ತು 6, 2023 ರಂದು ಮಣಿಪಾಲದಲ್ಲಿ ನಡೆಯಲಿದೆ.
ಅಮೆರಿಕೆದ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್‌ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋ ಆರಂಭಿಸಿದ ‘ಗಾಂಧಿ-ಕಿಂಗ್ ಎಕ್ಸ್‌ಚೇಂಜ್’ ಕಾರ್ಯಕ್ರಮದ ಭಾಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಉಡುಪಿ ಸೀರೆ ಮತ್ತು ಸಸ್ಟೈನೇಬಲ್ ಫ್ಯಾಷನ್‌ನ ಮಹತ್ವ ಮತ್ತು ಪ್ರಜ್ಞಾಪೂರ್ವಕ ಬಳಕೆಯ ಬಗ್ಗೆ ಗಮನ ಸೆಳೆಯುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಎರಡು ದಿನಗಳ ಕಾರ್ಯಕ್ರಮದಲ್ಲಿ ವಿವಿಧ ವಿದ್ವಾಂಸರು, ತಜ್ಞರು ಮತ್ತು ನೇಕಾರರಿಂದ ಉಡುಪಿ ಸೀರೆಯೊಂದಿಗೆ ಸುಸ್ಥಿರ ಜೀವನ ಹೇಗೆ ಸಾಧ್ಯ ಎಂಬ ಕುರಿತು ವಿಶೇಷ ಉಪನ್ಯಾಸಗಳು, ಸಾಕ್ಷ್ಯಚಿತ್ರ ಪ್ರದರ್ಶನಗಳು, ಕಾರ್ಯಾಗಾರಗಳು ನಡೆಯಲಿವೆ. ಇದು ಪರಿಸರ ಸ್ನೇಹಿ ಉಡುಪಿ ಸೀರೆಗಳನ್ನು ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನವಾಗಿದೆ.
ಮೇ 5 ರಂದು ಮಾಹೆಯ ಗಾಂಧಿಯನ್ ಸೆಂಟರ್ ನಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಇಂದಿರಾ ಬಲ್ಲಾಳ್ ಅವರು ಉದ್ಘಾಟಿಸಲಿದ್ದಾರೆ. ಕದಿಕೆ ಟ್ರಸ್ಟ್ ನ ಮಮತಾ ರೈ ಅವರು ಗೌರವ ಅತಿಥಿಗಳಾಗಿ ಆಗಮಿಸಲಿದ್ದು ಮಾಹೆಯ ಉಪಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ತದನಂತರ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮವು ಉಡುಪಿ ಸೀರೆಗಳ ಪ್ರದರ್ಶನ, ಸಂಬಂಧಿತ ಛಾಯಾಚಿತ್ರಗಳ ಪ್ರದರ್ಶನ, ಇತಿಹಾಸದ ಕಾರ್ನರ್, ಯಕ್ಷಗಾನ ಕಾರ್ನರ್, ನೇಕಾರರಿಂದ ಉಡುಪಿ ಸೀರೆಗಳ ಮಾರಾಟ ಇತ್ಯಾದಿಗಳನ್ನು ಒಳಗೊಂಡಿದೆ ನಡೆಯಲಿದೆ.
ಮರುದಿನ (ಮೇ 6 ರಂದು), ಮಾಹೆಯ ಡಿಪಾರ್ಟ್ಮೆಂಟ್ ಆಫ್ ಡಿಸೈನ್ ನ ಸಂಯೋಜಕಿ ಡಾ. ವೀಣಾ ರಾವ್ ಅವರು ಮಧ್ಯಾಹ್ನ 3 30 ಗಂಟೆಗೆ ಬಾಳೆ ನಾರಿನಿಂದ ಪರಿಸರ ಸ್ನೇಹಿ ಉಡುಪುಗಳ ತಯಾರಿ ಕುರಿತ ಕಾರ್ಯಾಗಾರವನ್ನು ನಡೆಸಲಿದ್ದಾರೆ ಮತ್ತು ನಂತರ ಸಂಜೆ 5 ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಣಿಪಾಲ ಮಹಿಳಾ ಸಮಾಜದ ಅಧ್ಯಕ್ಷೆ ಡಾ. ಸುಲತಾ ಭಂಡಾರಿ ಆಗಮಿಸಲಿದ್ದಾರೆ.
ಈ ಭಾಗದ ಸಂಸ್ಕೃತಿಯ ಭಾಗವಾಗಿರುವ ಉಡುಪಿ ಸೀರೆಗಳು, ಒಂದೇ ಪದರದ ಹತ್ತಿ ನೂಲು ಮತ್ತು ನೈಸರ್ಗಿಕ ಬಣ್ಣಗಳಿಂದ ಮಾಡಿದ ಮತ್ತು ಕೈಯಿಂದ ನೇಯ್ದ ಸೀರೆಗಳಾಗಿವೆ ಮತ್ತು ಇವು ಯಾವುದೇ ರೀತಿಯ ಪರಿಸರ ಹಾನಿಯನ್ನುಂಟುಮಾಡುವುದಿಲ್ಲ. ಉಡಲು ತುಂಬಾ ಹಗುರವಾಗಿರುತ್ತವೆ ಮತ್ತು ಆರಾಮದಾಯಕವಾಗಿಯೂ ಇರುವ ಉಡುಪಿ ಸೀರೆಗಳ ಉತ್ಪಾದನೆಯು ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸುಸ್ಥಿರತೆಯ ಭರವಸೆಯನ್ನು ಒದಗಿಸುತ್ತದೆ.
ಅಮೆರಿಕೆಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಬ್ಯೂರೋದಿಂದ ನೀಡಲಾಗುವ ಗಾಂಧಿ-ಕಿಂಗ್ ಫೆಲೋಶಿಪ್‌ನ ಗುರಿಯು ನಮ್ಮ ಇತಿಹಾಸವನ್ನು ಅನ್ವೇಷಿಸುವ ಮೂಲಕ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ನಾಗರಿಕ ಹಕ್ಕುಗಳು, ಸಾಮಾಜಿಕ ನ್ಯಾಯವನ್ನು ಮುನ್ನಡೆಸಲು ಒಟ್ಟಾಗಿ ಕೆಲಸ ಮಾಡಲು ಭಾರತ ಮತ್ತು ಅಮೆರಿಕೆಯ ಯುವನಾಯಕರನ್ನು ಪ್ರೇರೇಪಿಸುವುದಾಗಿದೆ ಮತ್ತು ಮಹಾತ್ಮಾ ಗಾಂಧಿಯವರ ಮತ್ತು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಅವರ ಆದರ್ಶಗಳನ್ನು ಪ್ರತಿಪಾದಿಸುವುದಾಗಿದೆ. ಮಾಹೆ GCPAS ನ ಹಳೆಯ ವಿದ್ಯಾರ್ಥಿಯಾಗಿರುವ ಲಾವಣ್ಯ ಮತ್ತು ಮುಂಬೈನಿಂದ ವಾಣಿಜ್ಯ ಪದವೀಧರರಾಗಿರುವ ರಾಯ್ಡನ್ ಅವರು 2022 ರ ಗಾಂಧಿ-ಕಿಂಗ್ ಫೆಲೋಶಿಪ್ ಗೆ ಭಾಜನರಾಗಿ ಅಮೆರಿಕೆದ ಅಲಬಾಮಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ತರಬೇತಿ ಪಡೆದಿದ್ದಾರೆ.