ಮಂಗಳೂರು, ಏ. 29: ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ನಮ್ಮ ದೇಶದಲ್ಲಿ ಹಳ್ಳಿಯಿಂದ ದಿಲ್ಲಿಯವರೆಗೆ ವಿವಿಧ ಮಟ್ಟದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಹಾಗೂ ಕೆಲವೊಮ್ಮೆ ಅನಿವಾರ್ಯವಾಗಿ ಅವಧಿಗೆ ಮುನ್ನ ಜರುಗುತ್ತಿರುವ ಚುನಾವಣೆಗಳಲ್ಲಿ ಒಂದರ ನಂತರ ಮತ್ತೊಂದರಲ್ಲಿ ಜನಬಲ, ಜಾತಿಬಲ, ತೋಳ್ಬಲ, ಅನೈತಿಕತೆ ಮುಂತಾದ ಅಪಮೌಲ್ಯಗಳ ಹಾಗೂ ಕೇವಲ ಅಧಿಕಾರ ದಾಹದಿಂದ ಪಕ್ಷಾಂತರ ಮಾಡುವ ತತ್ವರಹಿತ ಪಕ್ಷಾಂತರಿಗಳ ಪ್ರಭಾವ ಹೆಚ್ಚಾಗುತ್ತಾ ಬಂದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ಅರಳಿನಾಗರಾಜ್ ಅಭಿಪ್ರಾಯಪಟ್ಟರು.
ಅವರು ಮಂಗಳೂರಿನ ಹೊಟೇಲ್ ಉತ್ಸವ ಸಭಾಂಗಣಲ್ಲಿ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ ಮತ್ತು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸದ್ಯದಲ್ಲಿಯೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೇಲೆ ಹೇಳಿದಂತಹ ವಿಚಾರಗಳಿಂದ ಮುಕ್ತವಾಗಿ ಚುನಾವಣೆಗಳು ನಡೆಯುವಂತೆ ಮಾಡುವ ಜವಾಬ್ದಾರಿ ಪ್ರಜ್ಞಾವಂತ ಪ್ರಬುದ್ಧ ದೇಶಾಭಿಮಾನಿ ನಾಗರಿಕರ ಕರ್ತವ್ಯವಾಗಿದೆ.
ರಾಜಕಾರಣಿಯ ಋಣ ಭಾರವಿಲ್ಲದೆ ಆಮಿಷಕ್ಕೊಳಗಾಗದೆ ಮತದಾರ ತಮ್ಮ ಮತವನ್ನು ಮಾರಿಕೊಳ್ಳದೆ ಜವಾಬ್ಧಾರಿಯುತವಾಗಿ ನಡೆಯಬೇಕು ಎಂದು ಹೇಳಿದರು. ಈ ಕರ್ತವ್ಯಗಳಿಂದ ಮತದಾರ ನುಣುಚಿಕೊಂಡರೆ ಮುಂದಿನ ಪೀಳಿಗೆಯವರ ಜೀವನ ನರಕ ಸದೃಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದ ಅವರು ಈ ಕರ್ತವ್ಯಗಳನ್ನು ಮರೆತ ಮತದಾರರನ್ನು ದೇವರು ಮತ್ತು ಮುಂದಿನ ಪೀಳಿಗೆ ಎಂದೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಎಚ್ಚೆತ್ತ ಮತದಾರ ಪ್ರಜಾತಂತ್ರಕ್ಕಾದಾರ ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆಗೊಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಂಡ್ಯದ ನ್ಯಾಯವಾದಿ ಗುರುಪ್ರಸಾದ್, ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ದಿ ಪ್ರತಿಷ್ಠಾನ ಅಧ್ಯಕ್ಷ ಗಂಗಾಧರ ಗಾಂಧಿ ಹಾಗೂ ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ರಾಣಿ ಪುಷ್ಪಲತಾದೇವಿ ಉಪಸ್ಥಿತರಿದ್ದರು.