ಬ್ರಹ್ಮಾವರ, ಏ. 18: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬಾರ್ಕೂರು ಇಲ್ಲಿನ ಎನ್.ಸಿ.ಸಿ ಘಟಕದ ವತಿಯಿಂದ ವಿಶ್ವ ಭೂ ದಿನದ ಅಂಗವಾಗಿ ಜಾಗೃತಿ ಜಾಥಾ ಮತ್ತು ನದಿ ಪರಿಸರ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭೂಸಂರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುವುದರೊಂದಿಗೆ ಚಾಲನೆಗೊಂಡ ಪರಿಸರ ಜಾಗೃತಿ ಜಾಥಾದಲ್ಲಿ ಕಾಲೇಜಿನ ಎನ್.ಸಿ.ಸಿ ಕೆಡೆಟ್ಸ್ಗಳು ಭಾಗವಹಿಸಿ, ಭಿತ್ತಿಚಿತ್ರ ಪ್ರದರ್ಶನ ಮತ್ತು ಘೋಷಣೆಗಳ ಮೂಲಕ ಜನರಲ್ಲಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿದರು.
ಹನೇಹಳ್ಳಿ ಮಾರ್ಗವಾಗಿ ನಾಲ್ಕು ಮೈಲಿ ಜಾಥಾ ನಡೆಸಿದ ಎನ್.ಸಿ.ಸಿ ಕೆಡೆಟ್ಸ್ಗಳು ನಂತರ ಬಾರ್ಕೂರು ರೈಲ್ವೇ ಸೇತುವೆ ನಮೀಪದ ಸೀತಾನದಿ ತಟದ ಪರಿಸರವನ್ನು ಸ್ವಚ್ಛಗೊಳಿಸಿದರು. ವಿಶ್ವ ಭೂ ದಿನದ ಈ ಸಂದರ್ಭದಲ್ಲಿ ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಸುದಿನ ಟಿ.ಎ ಮಾತನಾಡಿ, ನಮ್ಮೆಲ್ಲರಿಗೆ ನೆಲೆಯಾದ ಭೂಮಿಯನ್ನು ಮುಂದಿನ ಜನಾಂಗಕ್ಕೆ ಬದುಕಲು ಯೋಗ್ಯವಾದ ರೀತಿಯಲ್ಲಿ ಹಸ್ತಾಂತರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಪರಿಸರವನ್ನು ಪ್ರೀತಿಸುವ ಮತ್ತು ಸಂರಕ್ಷಿಸುವ ನಿಟ್ಟಿನಲ್ಲಿ ಯುವಜನತೆ ಸಕ್ರಿಯವಾಗಿ ತೊಡಗಿಕೊಳ್ಳಬೇಕು ಎಂದರು.