ಪ್ರಯಾಗ್ರಾಜ್, ಏ. 16: ಉಮೇಶ್ ಪಾಲ್ ಹತ್ಯೆ ಪ್ರಕರಣದ ಆರೋಪಿ, ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ನನ್ನು ಪೊಲೀಸರ ಎದುರೇ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಅತೀಕ್ ಅಹ್ಮದ್ ಮತ್ತು ಆತನ ಸಹೋದರ ಅಶ್ರಫ್ ನನ್ನು ವೈದ್ಯಕೀಯ ತಪಾಸಣೆಗಾಗಿ ಪೊಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದಾಗಲೇ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡುತ್ತಿರುವ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಂಡಿನ ದಾಳಿ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸಲು ಬಂದವರು ಮಾಧ್ಯಮದವರಂತೆ ವೇಷ ಧರಿಸಿದ್ದರು ಎನ್ನಲಾಗಿದೆ. ಏಪ್ರಿಲ್ 13 ರಂದು ಅತೀಕ್ ಅಹ್ಮದ್ ಪುತ್ರ ಅಸದ್ನನ್ನು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಪೊಲೀಸರು ಎನ್ಕೌಂಟರ್ ಮಾಡಿದ ಬೆನ್ನಲ್ಲೇ ಈ ಘಟನೆ ನಡೆದಿದೆ.