ಕೋಟ, ಏ. 14: ಕೆಲವೊಮ್ಮೆ ಅವಕಾಶಗಳು ತಾನಾಗಿ ಬರುತ್ತವೆ, ಇನ್ಮೊಮ್ಮೆ ನಾವೇ ಸೃಷ್ಠಿ ಮಾಡಿಕೊಳ್ಳಬೇಕಾದ ಅನಿವಾರ್ಯತೆಯಿದೆ, ಅವಕಾಶಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡಾಗ ಸಾಧನೆ ಸಾಧ್ಯ, ಮಕ್ಕಳು ಶಾಲಾ ಜೀವನದಲ್ಲಿ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ಅಮೆಚೂರ್ ರಾಜ್ಯ ಕಬಡ್ಡಿ ಘಟಕದ ಉಪಾಧ್ಯಕ್ಷರಾದ ರಾಜೇಂದ್ರ ಸುವರ್ಣ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು- ಪಡುಕರೆ, ಜೆ.ಸಿ.ಐ ಕಲ್ಯಾಣಪುರ, ಉಸಿರು ತರಬೇತಿ- ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ದಿ.ಕೆ.ಸಿ. ಕುಂದರ್ ಸ್ಮರಣಾರ್ಥ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-2023(ಪರಿವರ್ತನೆಯ ತಂಗಾಳಿ) ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಂಸ್ಕೃತಿಕ ಚಿಂತಕ ಶ್ರೀಕಾಂತ್ ಶೆಣೈ ಮಾತನಾಡಿ ಮಕ್ಕಳಿಗಾಗಿ ವಿಶೇಷ ರೀತಿಯ ಕಾರ್ಯಕ್ರಮಗಳ ಮೂಲಕ ಅವರ ಬದುಕಿನ ಯಶಸ್ಸಿಗಾಗಿ ಕೈಜೋಡಿಸುವ ಥೀಮ್ ಪಾರ್ಕ್ ಕಾರ್ಯ ಶ್ಲಾಘನೀಯ ಎಂದರು. ಪಂಚವರ್ಣ ಯುವಕ ಮಂಡಲ (ರಿ.) ಕೋಟ ಕಾರ್ಯಾಧ್ಯಕ್ಷ, ಪತ್ರಕರ್ತ ರವೀಂದ್ರ ಕೋಟ ಅವರು ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಚತೆಯ ಕಾಳಜಿ ಬಗ್ಗೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಸತೀಶ್ ವಡ್ಡರ್ಸೆ, ಕುಮಾರ್ ಶಿಬಿರದ ತಂಡದ ನಾಯಕರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ಶಿಬಿರಾರ್ಥಿಗಳು ನಿರ್ವಹಣೆ ಮಾಡಿದರು.