ಮೂಡುಬಿದಿರೆ, ಏ. 14: ಉತ್ತಮ ಪರಿಸರ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಆಳ್ವಾಸ್ ಕಾಲೇಜು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅಂತಹ ಪೂರಕ ವಾತವರಣ ನಿರ್ಮಾಣ ಮಾಡಿಕೊಡುತ್ತದೆ ಎಂದು ಆಳ್ವಾಸ್ ಪದವಿ ಕಾಲೇಜಿನ ಪ್ರಾಚಾರ‍್ಯ ಡಾ. ಕುರಿಯನ್ ಹೇಳಿದರು. ಆಳ್ವಾಸ್ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ಸಿಎ ಇಂಟರ್‌ಮಿಡಿಯೇಟ್ ವಿದ್ಯಾರ್ಥಿಗಳ ಶಿಕ್ಷಕ- ಪೋಷಕ ಸಭೆ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆಯಿತು.
ಸಿಎ ಇಂಟರ್‌ಮಿಡಿಯೇಟ್ ಪರೀಕ್ಷೆ ಪಾಸಾದರೆ ಸಿಎ ಗುರಿಯ ೫೦ ಶೇಕಡಾ ದಾರಿಯನ್ನು ಕ್ರಮಿಸಿದಂತೆ. ಇನ್ನುಳಿದ ಅರ್ಧ ದಾರಿಯನ್ನು ಶ್ರಮವಹಿಸಿ ತಲುಪಿದರೆ ವ್ಯಯಿಸಿದ ಶ್ರಮಕ್ಕೆ ಸಫಲ್ಯತೆ ಸಿಕ್ಕಂತೆ. ಈ ಹಂತದಲ್ಲಿ ವಿದ್ಯಾರ್ಥಿಗಳೊಂದಿಗೆ ಪೋಷಕರ ಪಾತ್ರ ಬಹುಮುಖ್ಯ ಎಂದರು. ಆಳ್ವಾಸ್‌ನಲ್ಲಿ ಸಿಎ ಇಂಟರ್‌ಮಿಡಿಯೇಟ್ ವಿದ್ಯಾರ್ಥಿಗಳಿಗೆ ಕಳೆದ ಮೂರು ತಿಂಗಳಲ್ಲಿ 43 ಮಾದರಿ ಪರೀಕ್ಷೆಗಳನ್ನು ಮಾಡಲಾಗಿದೆ. ನುರಿತ ಶಿಕ್ಷಕರಿಂದ ವಾರದ ಏಳು ದಿನ ತರಗತಿಯನ್ನು ನಡೆಸಲಾಗುತ್ತಿದೆ. ಈ ಎಲ್ಲಾ ಶ್ರಮದಿಂದಾಗಿಯೇ ಆಳ್ವಾಸ್ ಇಂದು ದೇಶದ ಶೇಕಡಾವಾರು ಫಲಿತಾಂಶದಲ್ಲಿ ಅಗ್ರಪಂಕ್ತಿಯಲ್ಲಿದೆ ಎಂದರು.
ಕಾರ‍್ಯಕ್ರಮದಲ್ಲಿ ವೃತ್ತಿಪರ ವಾಣಿಜ್ಯ ವಿಭಾಗದ ಮುಖ್ಯಸ್ಥ ಅಶೋಕ ಕೆ.ಜಿ., ವಿಭಾಗದ ಸಂಯೋಜಕಿ ಅಪರ್ಣಾ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಫ್ರೀಮಲ್, ನಂದನ ಹಾಗೂ ಪ್ರಜ್ವಲ್ ಅನುಭವ ಹಂಚಿಕೊಂಡರು. ಸೃಜಾ ಪ್ರಾರ್ಥಿಸಿ, ದಶಮಿ ಕಾರ‍್ಯಕ್ರಮ ನಿರ್ವಹಿಸಿ, ಅಥೀಶ್ ವರದಿ ವಾಚಿಸಿದರು.