ಉಡುಪಿ, ಏ. 13: ವಿಧಾನಸಭಾ ಚುನಾವಣೆಯು ನಿಷ್ಪಕ್ಷಪಾತ ಮತ್ತು ನ್ಯಾಯಸಮ್ಮತವಾಗಿ ನಡೆಯುವಂತೆ ಅಧಿಕಾರಿಗಳು ಚುನಾವಣಾ ಆಯೋಗ ಸೂಚಿಸುವ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದು ಭಾರತೀಯ ಕಂದಾಯ ಸೇವೆಯ ಅಧಿಕಾರಿ ಹಾಗೂ ವೆಚ್ಚ ವೀಕ್ಷಕರಾದ ಮುಖೇಶ್ ತಾರಾಚಂದ್ ಥಕ್ವಾನಿ ಅವರು ತಿಳಿಸಿದರು. ಅವರು ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವೆಚ್ಚ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣೆಗೆ ಸ್ಪರ್ಧಿಸುವ ಪ್ರತಿಯೊಬ್ಬ ಅಭ್ಯರ್ಥಿಗಳ ಚುನಾವಣಾ ವೆಚ್ಚದ ಬಗ್ಗೆ ನಿಗಾ ವಹಿಸಬೇಕು, ರಾಜ್ಯ ಚುನಾವಣಾ ಆಯೋಗ ಈ ಸಂಬಂಧ ನೀಡಿರುವ ನಿರ್ದೇಶನಗಳನ್ನು ಪಾಲಿಸುವುದರೊಂದಿಗೆ ವೆಚ್ಚ ನಿರ್ವಹಣೆಯ ಬಗ್ಗೆ ಗಮನಹರಿಸಬೇಕು ಎಂದರು. ಅಭ್ಯರ್ಥಿಗಳು ಮಾಧ್ಯಮಗಳಲ್ಲಿ ನೀಡುವ ಜಾಹೀರಾತುಗಳು ಜೊತೆಗೆ ಸಾಮಾಜಕ ಜಾಲತಾಣಗಳಲ್ಲಿನ ಜಾಹೀರಾತುಗಳು ಸೇರಿದಂತೆ, ಕಾಸಿಗಾಗಿ ಸುದ್ದಿಗಳ ಬಗ್ಗೆಯೂ ನಿಗಾವಹಿಸಿ ಅದರ ಖರ್ಚು ವೆಚ್ಚ ಬಗ್ಗೆ ವೆಚ್ಚ ಪರಿಶೀಲನಾ ಸಮಿತಿಗೆ ನೀಡಬೇಕು ಎಂದರು.
ಭಾರತೀಯ ಕಂದಾಯ ಸೇವೆಯ ಅಧಿಕಾರಿ ಹಾಗೂ ವೆಚ್ಚ ವೀಕ್ಷಕರಾದ ಅಂಕಿತ್ ಸೋಮನಿ ಮಾತನಾಡಿ, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಅಧಿಕಾರಿಗಳು ನಿಯಮಗಳನ್ನು ಸರಿಯಾಗಿ ಅರಿತು ಒಂದು ತಂಡದ ರೂಪದಲ್ಲಿ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದಾಗ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗುತ್ತದೆ ಎಂದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಾತನಾಡಿ, ಜಿಲ್ಲೆಯಲ್ಲಿ ನ್ಯಾಯಸಮ್ಮತ ಚುನಾವಣೆ ನಡೆಸಲು ವಿವಿದ ತಂಢಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ನೇಮಿಸಲಾಗಿದ್ದು, ಈಗಾಗಲೇ ಎಲ್ಲಾ ತಂಡಗಳೂ ತಮ್ಮ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿವೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಾಣಧಿಕಾರಿ ಪ್ರಸನ್ನ ಹೆಚ್,. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚೀಂದ್ರ , ಪ್ರೋಬೇಷನರಿ ಐ.ಎ.ಎಸ್ ಅಧಿಕಾರಿ ಯತೀಶ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಚುನಾವಣಾ ವೆಚ್ಚ ವೀಕ್ಷಣೆ ತಂಡದ ಮುಖ್ಯಸ್ಥ ಪ್ರಸನ್ನ ಭಕ್ತ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಮತ್ತಿತರರು ಉಪಸ್ಥಿತರಿದ್ದರು.