ಕೋಟ, ಏ. 11: ಪ್ರತಿಯೊಂದು ಮಕ್ಕಳಲ್ಲೂ ತನ್ನದೇ ಆದ ಪ್ರತಿಭೆ ಅಡಕವಾಗಿರುತ್ತದೆ. ಅಂತಹ ಪ್ರತಿಭೆ ಅನಾವರಣಕ್ಕೆ ಬೇಸಿಗೆ ಶಿಬಿರದಂತಹ ಕಾರ್ಯಕ್ರಮ ಸಹಕರಿಯಾಗುತ್ತದೆ. ಮಕ್ಕಳನ್ನು ಕೇಂದ್ರಿಕರಿಸಿಕೊಂಡು ಥೀಮ್ ಪಾರ್ಕ್ನಲ್ಲಿ ಇನ್ನಷ್ಟೂ ಚಟುವಟಿಕೆ ನಡೆಸುವ ಯೋಜನೆಯಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ, ಗೀತಾನಂದ ಫೌಂಡೇಶನ್ ಮಣೂರು-ಪಡುಕೆರೆ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್, ಗೀತಾನಂದ ಫೌಂಡೇಶನ್ ಮಣೂರು- ಪಡುಕರೆ, ಜೆ.ಸಿ.ಐ ಕಲ್ಯಾಣಪುರ, ಉಸಿರು ತರಬೇತಿ- ಅಧ್ಯಯನ ಕೇಂದ್ರ ಕೋಟ ಇವರ ಆಶ್ರಯದಲ್ಲಿ ದಿ.ಕೆ.ಸಿ. ಕುಂದರ್ ಸ್ಮರಣಾರ್ಥ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮಕ್ಕಳ ಬೇಸಿಗೆ ಶಿಬಿರ ವಿಕಸನ-೨೦೨೩(ಪರಿವರ್ತನೆಯ ತಂಗಾಳಿ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ವೇದಿಕೆಯಲ್ಲಿ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್, ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ರವೀಂದ್ರ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಕುಮಾರ್ ಶೆಟ್ಟಿ, ಜೆ.ಸಿ.ಐ ಕಲ್ಯಾಣಪುರ ಅಧ್ಯಕ್ಷೆ ಅನಿತಾ ನರೇಂದ್ರ ಕುಮಾರ್, ಸಂಪನ್ಮೂಲ ವ್ಯಕ್ತಿ ಶಿಕ್ಷಕ ಸತೀಶ್ ವಡ್ಡರ್ಸೆ, ಶಿಬಿರದ ತಂಡಗಳ ನಾಯಕರು ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾಪಿಸಿ, ರೋಶನ್ ಗಿಳಿಯಾರು ವಂದಿಸಿದರು. ಶಿಬಿರಾರ್ಥಿ ಪಾವನಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.