ಉಡುಪಿ, ಏ. 10: ಉಡುಪಿ ಜಿಲ್ಲೆಯ ಬ್ರಹ್ಮಾವರದ 52ನೇ ಹೇರೂರಿನಲ್ಲಿ ಇರುವ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಕೆನರಾ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಗ್ರಾಮಾಭಿವೃದ್ಧಿ ಮತ್ತು ಸ್ವಉದ್ಯೋಗ ತರಬೇತಿ ಸಂಸ್ಥೆ (ರುಡ್ ಸೆಟ್ ಸಂಸ್ಥೆ) ಯಲ್ಲಿ ಒಂದು ತಿಂಗಳ ಕಾಲ ನಡೆಯುತ್ತಿರುವ ಸೆಲ್ ಫೋನ್ ರಿಪೇರಿ (ಮೊಬೈಲ್) ತರಬೇತಿಯನ್ನು ಪಡೆಯುತ್ತಿರುವ ಶಿರಾರ್ಥಿಗಳಿಂದ ಸಾರ್ವಜನಿಕರಿಗಾಗಿ ಒಂದು ದಿನದ ಉಚಿತ ರಿಪೇರಿ ಸೇವಾ (ಕ್ಯಾಂಪ್) ಚಟುವಟಿಕೆಯನ್ನು ಉಡುಪಿ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಸಿಂಡಿಕೇಟ್ ಟವರ್ ಉಡುಪಿ ಮುಂಭಾಗದಲ್ಲಿ ನಡೆಸಲಾಯಿತು.
ಒಂದು ದಿನ ಉಚಿತ ಮೊಬೈಲ್ ಸರ್ವಿಸ್ ಕ್ಯಾಂಪ್ ನ್ನು ಕೆನರಾ ಬ್ಯಾಂಕ್ ನ ಡಿವಿಜನ್ ಮ್ಯಾನೇಜರ್ ಗಿರೀಶ ದೇವಿದಾಸ್ ಶ್ಯಾನಬೋಗ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಜೊತೆಯಲ್ಲಿ ಕ್ಯಾಂಪ್ ನಡೆಸಲು ಸಹಕರಿಸಿದ ಉಡುಪಿ ಜಿಲ್ಲಾ ಅಗ್ರಣಿ ಬ್ಯಾಂಕ್ ನ ಅಗ್ರಣಿ ಜಿಲ್ಲಾ ವಿಭಾಗೀಯ ಪ್ರಬಂಧಕರಾದ ಪಿ.ಎಂ. ಪಿಂಜಾರ್ ಹಾಗೂ ಕೆನರಾ ಬ್ಯಾಂಕಿನ ರಾಜೇಶ್ ಶೆಣೈ, ಹರೀಶ್ ಭಾಗವಹಿಸಿದ್ದರು.
ರುಡ್ ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಕ್ಯಾಂಪ್ ನಲ್ಲಿ ಮೊಬೈಲ್ ಫೋನ್ ರಿಪೇರಿ ತರಬೇತಿಯ ಗೌರವ ಉಪನ್ಯಾಸಕರಾದ ಗುರುರಾಜ ಮತ್ತು ಶಿಬಿರಾರ್ಥಿಗಳು ಭಾಗವಹಿಸಿದರು.