ಉಡುಪಿ, ಏ. 9: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಹಾಗೂ ಕೇರಳ ಕಲ್ಚರಲ್ ಅಂಡ್ ಸೋಶಿಯಲ್ ಸೆಂಟರ್ ಉಡುಪಿ ಜಂಟಿಯಾಗಿ ಏರ್ಪಡಿಸಿದ್ದ ಕನ್ನಡ ಮಾತನಾಡು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕಥೆಗಾರರು, ವಿಮರ್ಶಕರಾದ ಬೆಳಗೋಡು ರಮೇಶ್ ಭಟ್ ಅವರು ಮಾತನಾಡುತ್ತಾ, ಭಾಷೆ ಇರುವುದು ಸಂಹನಕ್ಕೆ, ಯಾವ ಭಾಷೆಯು ಇನ್ನೊಂದು ಭಾಷೆಯನ್ನು ದ್ವೇಷಿಸು ಎನ್ನುವುದಿಲ್ಲ.
ಭಾಷೆ ಮತ್ತು ಮನುಷ್ಯ ಬೆಳೆಯುವುದು ಕೊಳ್ಳು -ಕೊಡುವುದರಿಂದ. ಕೂಪಮಂಡೂಕರಾಗಬೇಡಿ. ಭಾಷೆಯ ವಿಷಯದಲ್ಲಿ ರಾಜಕಾರಣಿಗಳ ಭಾಷೆಯ ಅಗತ್ಯವಿಲ್ಲ ಎನ್ನುವ ಕಿವಿ ಮಾತನ್ನು ಹೇಳಿದರು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ ಹಾಗೂ ತಾಲೂಕು ಘಟಕ ಬಹಳ ಒಳ್ಳೆಯ ಕೆಲಸಗಳನ್ನು ಸಮಾಜಕ್ಕೆ ನೀಡುತ್ತಿದೆ ಎಂದರು.
ಕನ್ನಡ ಮಾತನಾಡು ಕಾರ್ಯಕ್ರಮದಲ್ಲಿ ಸುಮಾರು ಎರಡು ತಿಂಗಳಿಂದ 30 ತರಗತಿಗಳು ನಡೆದಿದ್ದು 25ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದು ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಭಾಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ವಹಿಸಿದ್ದರು. ಕನ್ನಡ ಮಾತನಾಡು ಕಾರ್ಯಕ್ರಮದ ಮುಖ್ಯ ತರಬೇತುದಾರರಾದ ಡಾ. ಗಣನಾಥ್ ಎಕ್ಕಾರು ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಮಣಿಪಾಲ ಸೋನಿಯಾ ಕ್ಲಿನಿಕ್ ವೈದ್ಯರಾದ ಡಾ. ಗಿರಿಜಾ, ಕೇರಳ ಸೋಶಿಯಲ್ ಮತ್ತು ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ಬಿನೇಶ್ ವಿ .ಸಿ., ಉಡುಪಿ ಜಿಲ್ಲಾ ಕಸಾಪ ಕೋಶಾಧ್ಯಕ್ಷರಾದ ಮನೋಹರ್ ವಿ ಉಪಸ್ಥಿತರಿದ್ದರು.
ಕಸಾಪ ಉಡುಪಿ ತಾಲೂಕಿನ ಅಧ್ಯಕ್ಷ ರವಿರಾಜ್ ಎಚ್.ವಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜನಾರ್ದನ್ ಕೊಡವೂರು ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.