ಈಗ ಏನು ಮಾತನಾಡಿದರೂ ರಾಜಕೀಯ ದೃಷ್ಟಿಯಿಂದಲೇ ನೇೂಡುವ ಕಾಲ. ನಂದಿನಿ ಅಂದರೆ ಕಾಂಗ್ರೆಸ್, ಅಮುಲ್ ಅಂದರೆ ಬಿಜೆಪಿ ಅನ್ನುವ ಬಹು ಬಾಲೀಶವಾದ ತರದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಒಂದು ವೇಳೆ ಈ ಅಮುಲ್ ಕನ್ನಡ ನಾಡಿಗೆ ಬಂದರೇನಾಯಿತು. ಹಾಗಾದರೆ ರಾಜ್ಯ-ರಾಜ್ಯ ನಡುವೆ ವ್ಯವಹಾರ ನಡೆಯುವುದು ತಪ್ಪೇ? ಇಂದು ಜಾಗತೀಕರಣ ಯುಗದಲ್ಲಿ ನಾವು ಇರುವಾಗ ದೇಶದ ಒಳಗಿನ ವಸ್ತು ವಿನಿಮಯಗಳಿಗೆ ನಿಷೇಧ ಹೇರುವುದು ಸಮಗ್ರ ರಾಷ್ಟ್ರದ ಹಿತದೃಷ್ಟಿಯಿಂದ ಅಷ್ಟೊಂದು ಆರೇೂಗ್ಯಪೂರ್ಣ ಬೆಳವಣಿಗೆಯಲ್ಲ ಅನ್ನುವುದು ಕೂಡ ಅಷ್ಟೇ ಸತ್ಯ. ಈ ನಿಟ್ಟಿನಲ್ಲಿ ನಂದಿನಿ ಮತ್ತು ಅಮುಲ್ ನಡುವಿನ ವ್ಯಾವಹಾರಿಕ ಸಂಬಂಧಗಳನ್ನು ಆರ್ಥಿಕ ತಜ್ಞರು ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಚಾರ.
ಹಾಗಾದರೆ ಗುಜರಾತ್ ಮೂಲದ ಅತಿ ದೊಡ್ಡ ಗಾತ್ರದಲ್ಲಿ ವ್ಯವಹರಿಸುತ್ತಿರುವ ಅಮುಲ್ ಹಾಲು ವಿತರಣಾ ಶೇಖರಣಾ ಸಂಸ್ಥೆ ನಮ್ಮ ರಾಜ್ಯಕ್ಕೆ ಬಂದರೆ ಆಗುವ ತೊಂದರೆಗಳೇನು? ಹಾಗಾದರೆ ಬೇರೆ ರಾಜ್ಯಗಳಲ್ಲಿ ನಮ್ಮ ನಂದಿನಿ ಮಾರುಕಟ್ಟೆಯಲ್ಲಿ ವ್ಯವಹರಿಸುವುದಿಲ್ಲವೇ? ಖಂಡಿತವಾಗಿಯೂ ಇದೆ. ಅಂತೆಯೇ ಬೇರೆ ರಾಜ್ಯಗಳ ಹಾಲು ನಮ್ಮ ರಾಜ್ಯದಲ್ಲಿ ವಿತರಣೆಯಾಗುತ್ತಿದೆ ಅನ್ನುವುದು ಕೂಡ ನಿಜ. ಹಾಗಾದರೆ ಈ ಗುಜರಾತ್ ಅಮುಲ್ ಗೆ ಏಕೆ ನಮ್ಮ ವಿರೇೂಧ ಅನ್ನುವ ಪ್ರಶ್ನೆ ಮೂಡುವುದು ನಿಜ.
ರಾಷ್ಟ್ರವ್ಯಾಪಿಯಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆ ಮಾಡಿ ಅತ್ಯಂತ ನ್ಯಾಯಯುತವಾದ ದರದಲ್ಲಿ ವಿತರಿಸುವ ಹಾಲಿನ ಘಟಕ ಅಂದರೆ ಅದು ಅಮುಲ್ ಸಂಸ್ಥೆ. ಒಂದು ವೇಳೆ ಈ ಅಮುಲ್ ಸಂಸ್ಥೆಯು ರಾಜ್ಯಕ್ಕೆ ಪ್ರವೇಶ ಮಾಡಿದ್ದೆ ಆದರೆ ನಮ್ಮ ನಂದಿನಿ ಈಗಿನ ಸ್ಥಿತಿಯಲ್ಲಿ ಉಸಿರಾಡಲು ಸಾಧ್ಯವೇ? ನಮ್ಮ ಈಗಿನ ನಂದಿನಿ ಸುಖವೋ ಕಷ್ಟವೋ ಸಹಕಾರಿ ವ್ಯವಸ್ಥೆ ಅಡಿಯಲ್ಲಿ ರೈತರು ಪಶು ಸಂಗೇೂಪನೆಯ ಮೂಲಕ ಹಾಲು ಉತ್ಪಾದನೆ ಮಾಡಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ರೈತರು ಅಗಾಧ ಸಂಖ್ಯೆಯಲ್ಲಿ ಇದ್ದಾರೆ, ಮತ್ತು ಗ್ರಾಹಕರು ಕೂಡಾ ಸಹಕಾರಿ ಸಂಘದ ಮೂಲಕ ಖರೀದಿಸುವವರು ಸಹ ಕೇೂಟಿಗಟ್ಟಲೆ ಮಂದಿ ಇದ್ದಾರೆ.
ನಮ್ಮ ಹಾಲುಣ್ಣುವ ಗ್ರಾಹಕರು ಅಮುಲ್ ಪ್ಯಾಕಿಗೆ ಸಂಪೂರ್ಣವಾಗಿ ಕೈ ಹಾಕಿ ಬಿಟ್ಟರೆ ನಂದಿನಿಯನ್ನು ನಂಬಿ ಬದುಕು ಕಟ್ಟಿಕೊಂಡ ರೈತರ ಪಾಡೇನು? ಸಹಕಾರಿ ತತ್ವದ ನಂದಿನಿ ಸಂಸ್ಥೆ ವ್ಯಾಪಾರಿ ಮಟ್ಟಕ್ಕೆ ಇಳಿಯಬೇಕಾಗಬಹುದು. ಇದು ಇಂದಿನ ಪರಿಸ್ಥಿತಿಯಲ್ಲಿ ಸಾಧ್ಯವೇ? ಅದು ಸಾಧ್ಯವಾಗದೆ ಹೇೂದಲ್ಲಿ ಗುಜರಾತ್ ಮೂಲದ ಅಮುಲ್ ಸಂಸ್ಥೆಯ ತೆಕ್ಕೆಗೆ ಅನಿವಾರ್ಯವಾಗಿ ಬೀಳಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ಬಹು ಹಿಂದೆಯೇ ಗಾಂಧೀಜಿಯವರು ಹೇಳಿದ ಮಾತು ಈಗ ಮತ್ತೆ ನೆನಪಾಗುತ್ತಿದೆ. “ವಸ್ತುಗಳ ಉತ್ಪಾದನೆಯಲ್ಲಿ ಪ್ರತಿಯೊಂದು ಗ್ರಾಮ ಸ್ವಾವಲಂಬನೆಯಾಗಿರ ಬೇಕು”. ಇದು ಗ್ರಾಮ ರಾಜ್ಯ ಸ್ವರಾಜ್ಯದ ಮೂಲ ಕಲ್ಪನೆಯೂ ಹೌದು. ಒಮ್ಮೆಲೆ ನಮ್ಮ ಮನೆಯ ಬಾಗಿಲು ತೆರೆದು ಬೇರೆಯವರ ಜೊತೆ ಸಖ್ಯ ಬೆಳೆಸಿಕೊಳ್ಳುವ ಮೊದಲು ನಮ್ಮ ಸ್ಥಿತಿಗತಿಯ ಬಗ್ಗೆ ಅರಿವಿರಬೇಕು. ಇದರ ಮುಂದಿನ ಪರಿಣಾಮಗಳೇನು ಅನ್ನುವುದು ಕೂಡ ರಾಜಕೀಯ ಮೀರಿದ ಚಿಂತನ ಮಂಥನ ನಡೆಯಬೇಕು. ಇದು ಮನೆಗೂ ಹಿತ ರಾಜ್ಯಕ್ಕೂ ಹಿತ ದೇಶಕ್ಕೂ ಹಿತ.
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.