ಉಡುಪಿ ಬುಲೆಟಿನ್ ನ್ಯೂಸ್ ಡೆಸ್ಕ್: ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಶನ್ (ನ್ಯಾಟೋ) ಇದರ 31ನೇ ಸದಸ್ಯ ರಾಷ್ಟ್ರವಾಗಿ ಫಿನ್ಲ್ಯಾಂಡ್ ಅಧಿಕೃತವಾಗಿ ಸೇರ್ಪಡೆಯಾಗಿದೆ. ಫಿನ್ ಲ್ಯಾಂಡ್ ವಿದೇಶಾಂಗ ಸಚಿವರು ಪ್ರವೇಶ ದಾಖಲೆಗೆ ಸಹಿ ಹಾಕಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಗೆ ನೀಡಿದರು. ಎಲ್ಲಾ ಪ್ರಕ್ರಿಯೆಗಳು ಮುಗಿದ ತಕ್ಷಣ ಫಿನ್ ಲ್ಯಾಂಡ್ ದೇಶದ ಧ್ವಜವು ನ್ಯಾಟೋ ಪ್ರಧಾನ ಕಚೇರಿಯಲ್ಲಿ ಹಾರಾಡಲಿದೆ.
ರಷ್ಯಾ ಕಿಡಿ: ‘ನ್ಯಾಟೋ ವಿಸ್ತರಣೆಯು ನಮ್ಮ ಭದ್ರತೆ ಮತ್ತು ರಷ್ಯಾದ ರಾಷ್ಟ್ರೀಯ ಹಿತಾಸಕ್ತಿಗಳ ಮೇಲಿನ ದಾಳಿಯಾಗಿದೆ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೊವ್ ಸುದ್ದಿಗಾರರಿಗೆ ತಿಳಿಸಿದರು. ರಷ್ಯಾ ಇದನ್ನು ಗಂಭೀರವಾಗಿ ಪರಿಗಣಿಸಿದ್ದು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.