ಉಡುಪಿ, ಮಾ. 26: ಆರೋಗ್ಯ ಸೇವೆಗಳು ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದ್ದು, ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಕೆಲವೊಂದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಲಿಂಗ ತಾರತಮ್ಯ ಮನೋಭಾವನೆಗಳ ಕಾರಣಗಳಿಂದಾಗಿ ನಿಯಮಿತ ಹಾಗೂ ಹೆಚ್ಚಿನ ಆರೋಗ್ಯ ಸೇವೆ ಪಡೆಯವುದರಿಂದ ವಂಚಿತರಾಗಿರುತ್ತಾರೆ. ಮಹಿಳೆಯರ ಆರೋಗ್ಯ ಸುಧಾರಣೆಗಾಗಿ ಮತ್ತು ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಪ್ರತ್ಯೇಕ ಕ್ಲಿನಿಕ್‌ಗಳ ಅವಶ್ಯಕತೆ ಇದ್ದು ಮಹಿಳೆಯರಿಗೆ ವಿಶೇಷ ಆರೋಗ್ಯ ಸೇವೆಗಳನ್ನು ಒದಗಿಸಲು ಆಯುಷ್ಮತಿ ಕ್ಲಿನಿಕ್‌ಗಳನ್ನು ರಾಜ್ಯಾದ್ಯಂತ ಪ್ರಮುಖ ನಗರಗಳಲ್ಲಿ ಸ್ಥಾಪಿಸಲಾಗುತ್ತಿದೆ.
ಮಹಿಳೆಯರಿಗೆ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವುದು. ಹದಿಹರೆಯದ ಹೆಣುಮಕ್ಕಳಿಗೆ ದೈಹಿಕ ಬದಲಾವಣೆ, ನೈರ್ಮಲ್ಯ ಮತ್ತು ಸಂತಾನೋತ್ಪತ್ತಿ ಕುರಿತು ಅರಿವು ಮೂಡಿಸುವುದು ಮತ್ತು ಆಪ್ತ ಸಮಾಲೋಚನೆ ನಡೆಸುವುದು. ಮೂವತ್ತು ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಅಸಾಂಕ್ರಮಿಕ ರೋಗಗಳ ತಪಾಸಣೆ ನಡೆಸುವುದು. ರೆಫರಲ್ ಸೇವೆ ಒದಗಿಸುವುದು ಈ ಆಯುಷ್ಮತಿ ಕ್ಲಿನಿಕ್ ನ ಪ್ರಮುಖ ಉದ್ದೇಶವಾಗಿದೆ.
ಈ ಕ್ಲಿನಿಕ್ ನಲ್ಲಿ ಪ್ರತೀ ದಿನ ಒಬ್ಬ ತಜ್ಞ ವೈದ್ಯರ ಸೇವೆಯು ಲಭ್ಯವಿದ್ದು, ಸೋಮವಾರ- ಫಿಜಿಷಿಯನ್, ಮಂಗಳವಾರ- ಮೂಳೆ ಮತ್ತು ಕೀಲು ತಜ್ಞರು, ಬುಧವಾರ- ಶಸ್ತ್ರಚಿಕಿತ್ಸಾ ತಜ್ಞರು, ಗುರುವಾರ- ಮಕ್ಕಳ ತಜ್ಞರು, ಶುಕ್ರವಾರ- ಸ್ತ್ರೀರೋಗ ತಜ್ಞರು, ಶನಿವಾರ- ಇತರೆ ತಜ್ಞರು (ಕಿವಿ, ಮೂಗು, ಗಂಟಲು, ಚರ್ಮ, ನೇತ್ರ) ಮಹಿಳೆಯರನ್ನು ತಪಾಸಣೆ ನಡೆಸಲಿದ್ದಾರೆ.
ಅಲ್ಲದೆ ಆಪ್ತ ಸಮಲೋಚನೆ ಸಹ ಲಭ್ಯವಿದ್ದು, ಋತುಚಕ್ರ ಸಂಬಂಧಿ ಹಾಗೂ ಋತುಚಕ್ರ ನೈರ್ಮಲ್ಯ, ಕುಟುಂಬ ಕಲ್ಯಾಣ ಯೋಜನೆಗಳು, ಅಸಾಂಕ್ರಾಮಿಕ ರೋಗಗಳು, ಸಂತಾನೋತ್ಪತ್ತಿ ಅಂಗಗಳ ಸೋಂಕು/ಲೈಂಗಿಕ ಸೋಂಕುಗಳು, ಮಾನಸಿಕ ಆರೋಗ್ಯ ಸಮಸ್ಯೆಗಳು, ಹದಿಹರೆಯದ ಸಮಸ್ಯೆಗಳು, ಮುಟ್ಟು ನಿಲ್ಲುವ ಸಮಯದ ಸಮಸ್ಯೆಗಳು, ಪೋಷ್ಟಿಕಾಂಶದ ಕೊರತೆಗಳ ಬಗ್ಗೆ ವೈದ್ಯರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡಯಬಹುದಾಗಿದ್ದು, ಅಲ್ಲದೇ ಲ್ಯಾಬ್ ಪರೀಕ್ಷೆಗಳ ಸೇವೆ ಮತ್ತು ಉಚಿತ ಔಷಧಿಗಳು ದೊರೆಯುತ್ತವೆ.
ಉಡುಪಿ ಜಿಲ್ಲೆಯಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ(ಅಲಂಕಾರ್ ಚಿತ್ರಮಂದಿರ ಹತ್ತಿರ)ಯಲ್ಲಿ ಆಯುಷ್ಮತಿ ಕ್ಲಿನಿಕ್ ಆರಂಭಿಸಲಾಗಿದ್ದು, ಈ ಕ್ಲಿನಿಕ್ ಬೆಳಿಗ್ಗೆ 9 ಘಂಟೆಯಿಂದ ಸಂಜೆ 4.30 ರವರೆಗೆ ತೆರೆದಿರುತ್ತದೆ. ಮಹಿಳೆಯವರು ಮತ್ತು ಹದಿಹರೆಯದ ಹೆಣ್ಣುಮಕ್ಕಳು ಇದರ ಸದುಪಯೋಗ ಪಡೆಯಬಹುದಾಗಿದೆ.
“ಆರೋಗ್ಯ ಸಮಸ್ಯೆಗಳ ಬಗ್ಗೆ ಪರೀಕ್ಷಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಶುಲ್ಕ ನೀಡಲಾಗದೇ, ತಜ್ಞ ವೈದ್ಯರ ಸೇವೆಯಿಂದ ವಂಚಿತರಾಗಿ, ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೇ ಸಾಕಷ್ಟು ಸಂಖ್ಯೆಯ ಮಹಿಳೆಯರು ಮತ್ತು ಹದಿ ಹರೆಯದವರು ಅನಾರೋಗ್ಯ ಪೀಡಿತರಾಗಿ,ಅನೇಕ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಜಿಲ್ಲೆಯಲ್ಲಿ ಆರಂಭವಾಗಿರುವ ಆಯುಷ್ಮತಿ ಕ್ಲಿನಿಕ್‌ಗಳಲ್ಲಿ ಮಹಿಳೆಯರು ಮತ್ತು ಹದಿ ಹರೆಯದವರಿಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ, ಆಪ್ತ ಸಮಾಲೋಚನೆಯೊಂದಿಗೆ ಅಗತ್ಯ ಔಷಧಗಳನ್ನು ಉಚಿತವಾಗಿ ನೀಡಲಾಗುವುದು. ಜಿಲ್ಲೆಯ ಮಹಿಳೆಯರು ಈ ಕೇಂದ್ರಗಳ ಮೂಲಕ ತಮ್ಮ ಆರೋಗ್ಯದ ಕುರಿತಂತೆ ಸಂಪೂರ್ಣ ಪ್ರಯೋಜನ ಪಡೆಯಬಹುದಾಗಿದೆ“– ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ
ಆಯುಷ್ಮತಿ ಕ್ಲಿನಿಕ್ ನ ಉದ್ಘಾಟನಾ ಕಾರ್ಯಕ್ರಮವನ್ನು ಮಾಚ್ 27 ರಂದು ಬೆಳಗ್ಗೆ 11.30 ಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಭಾರತ ಸರ್ಕಾರದ ಆರೋಗ್ಯ ಸಚಿವರು ಮತ್ತು ರಾಜ್ಯದ ಆರೋಗ್ಯ ಸಚಿವರು ವರ್ಚುಲ್ ಮೂಲಕ ನೆರವೇರಿಸಲಿದ್ದು, ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಉಡುಪಿಯ ಅಲಂಕಾರ್ ಚಿತ್ರಮಂದಿರದ ಬಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಆಯುಷ್ಮತಿ ಕ್ಲಿನಿಕ್ ನಲ್ಲಿ ಮಾಡಲಾಗಿದ್ದು, ಜಿಲ್ಲೆಯ ಆಯುಷ್ಮತಿ ಕ್ಲಿನಿಕ್ ನ ಉದ್ಘಾಟನೆ ಸಹ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.