ಮಂಗಳೂರು, ಮಾ. 24: ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಡಿ ವೇದವ್ಯಾಸ ಕಾಮತ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ಪ್ರಥಮ ಹಾಗೂ ಅತೀ ದೊಡ್ಡ ಆಹಾರ ಪಥ ಉತ್ಸವಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಬಳಿ ಅದ್ದೂರಿ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ತುಳುನಾಡಿನ ವಿಶೇಷ ಖಾದ್ಯಗಳು ಮತ್ತು ಅಂತರಾಜ್ಯದ ತಿಂಡಿ ತಿನಿಸುಗಳು, ರಂಗುರಂಗಿನ ಸಾಂಸ್ಕೃತಿಕ ಸಂಭ್ರಮದ ಸ್ಪರ್ಶದೊಂದಿಗೆ ವಿಶಿಷ್ಟ ಅನುಭವ ಹಾಗೂ ಅನುಭೂತಿಯನ್ನು ನಾಗರಿಕರಿಗೆ 5 ದಿನಗಳ ಕಾಲ ಉಣಬಡಿಸಲಿದೆ. ಮಂಗಳೂರು ಆಹಾರ ಪಥ ಉತ್ಸವ ಮಾರ್ಚ್ 22 ರಿಂದ 26 ರವರೆಗೆ ಸಂಜೆ 5 ರಿಂದ 11 ಗಂಟೆಯವರೆಗೆ ನಡೆಯಲಿದ್ದು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿರುವುದು ಖುಷಿ ತಂದಿದೆ.
ತುಳುನಾಡಿನ ಆಹಾರ ಸಮೃದ್ಧತೆಯನ್ನು ಈ ತಲೆಮಾರಿಗೆ ಪರಿಚಯಿಸುವ ಮತ್ತು ಸ್ವ ಉದ್ಯೋಗಕ್ಕೆ ವೇದಿಕೆ ಒದಗಿಸಿ ಪ್ರೋತ್ಸಾಹಿಸುವ ಉದ್ದೇಶದೊಂದಿಗೆ ಉತ್ಸವ ನಡೆಯಲಿದೆ. ಸ್ವ ಉದ್ಯೋಗ, ವಿವಿಧ ವ್ಯವಹಾರ ಕ್ಷೇತ್ರಗಳಾದ ಆತಿಥ್ಯ, ಐಸ್ ಕ್ರೀಂ, ಗೃಹ ಉತ್ಪನ್ನಗಳು, ಕ್ಯಾಟರಿಂಗ್ ಉದ್ಯಮದವರಿಗೆ ವೇದಿಕೆ ಕಲ್ಪಿಸುವ ಸದುದ್ದೇಶ ಇದೆ. ವಿಭಿನ್ನ ಸಾಂಸ್ಕೃತಿಕ, ಕರಾವಳಿಯ ಮನೋರಂಜನಾ ಕಾರ್ಯಕ್ರಮಗಳು ಉತ್ಸವದ ಮೆರಗು ಹೆಚ್ಚಿಸುತ್ತಿವೆ ಎಂದರು.
ಕರಾವಳಿ ಉತ್ಸವ ಮೈದಾನದ ಮುಂಭಾಗದಿಂದ ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ವೃತ್ತ ಮುಖಾಂತರ ಮಣ್ಣಗುಡ್ಡೆ ಜಂಕ್ಷನ್ ತನಕ 200 ಮಿಕ್ಕಿ ಸ್ಟಾಲ್, ಸಾಂಸ್ಕೃತಿಕ ವೇದಿಕೆಗಳು, ರಸ್ತೆಗಳ ಉದ್ದಕ್ಕೂ ದೀಪಾಲಂಕಾರ, ಮಕ್ಕಳಿಗೆ ಆಡಲು ಪ್ರತ್ಯೇಕ ಕಿಡ್ಸ್ ಝೋನ್ ವಿಶೇಷ ಆಕರ್ಷಣೆಯಾಗಿದೆ. ನಿತ್ಯ ಸಾವಿರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್, ಮೂಡಾ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ ಪಾಂಡೇಶ್ವರ, ಪ್ರಮುಖರಾದ ರೂಪಾ ಡಿ ಬಂಗೇರ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯ್ ಪೂಜಾರಿ ಬಳ್ಳಾಲಭಾಗ್, ಜಗದೀಶ್ ಕದ್ರಿ, ಲಲಿತ್ ರಾಜ್ ಮೆಂಡನ್, ಅಶ್ವಿತ್ ಕೊಟ್ಟಾರಿ, ಮುಂತಾದವರು ಉಪಸ್ಥಿತರಿದ್ದರು.