Sunday, November 24, 2024
Sunday, November 24, 2024

ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ ಹಂಚುವ ಕಾಂಗ್ರೆಸ್ ಪಕ್ಷ: ಶೋಭಾ ಕರಂದ್ಲಾಜೆ

ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ ಹಂಚುವ ಕಾಂಗ್ರೆಸ್ ಪಕ್ಷ: ಶೋಭಾ ಕರಂದ್ಲಾಜೆ

Date:

ಬೆಂಗಳೂರು, ಮಾ. 22: ಕಾಂಗ್ರೆಸ್‍ನವರು ಜನರನ್ನು ಮರುಳು ಮಾಡಲು, ಜನರಿಗೆ ಮೋಸ ಮಾಡಲು ಗ್ಯಾರಂಟಿ ಕಾರ್ಡ್ ಹಂಚುತ್ತಿದ್ದಾರೆ ಎಂದು ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಆರೋಪಿಸಿದರು. ನಗರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ನೀವು 2013ರಿಂದ 2018ರವರೆಗೆ ಅಧಿಕಾರ ನಡೆಸಿದ್ದೀರಿ. ಆಗ ನೀವು ಒಂದು ಸಮುದಾಯದ ಓಲೈಕೆಗಾಗಿ ಮಾತ್ರ ಯೋಜನೆ ಕೊಟ್ಟಿದ್ದೀರಲ್ಲವೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ಸಿನ ಸುಳ್ಳು ಭರವಸೆ ನಂಬಲು ಕರ್ನಾಟಕದ ಜನರು ಮೂರ್ಖರಲ್ಲ. ಕರ್ನಾಟಕದ ಜನರು ವಿದ್ಯಾವಂತರು, ಪ್ರಜ್ಞಾವಂತರು, ಬುದ್ಧಿವಂತರು. ಅವರೆಲ್ಲರೂ ಮಾಧ್ಯಮ ನೋಡುತ್ತಾರೆ; ಸೋಷಿಯಲ್ ಮೀಡಿಯ ಗಮನಿಸುತ್ತಾರೆ; ಯಾವ ರಾಜ್ಯದಲ್ಲಿ ನೀವು ಮೋಸ ಮಾಡಿದ್ದೀರೆಂಬ ಅರಿವು ಅವರಿಗೆ ಇದೆ ಎಂದು ತಿಳಿಸಿದರು. 2001ರ ಗ್ಯಾರಂಟಿ ಕಾರ್ಡ್, 2013ರ ಗ್ಯಾರಂಟಿ ಕಾರ್ಡ್ ಏನಾಗಿದೆ ಎಂದು ಕಾಂಗ್ರೆಸ್‍ನ್ನು ಜನತೆ ಪ್ರಶ್ನಿಸಬೇಕು ಎಂದು ಮನವಿ ಮಾಡಿದರು.

ಯಾವ ಹಣದಿಂದ ಕೊಡುತ್ತೀರಿ? ಮಹಿಳೆಯರಿಗೆ 2 ಸಾವಿರ, 200 ಯೂನಿಟ್ ಉಚಿತ ವಿದ್ಯುತ್, ಯುವಕರಿಗೆ 3000 -1500 ರೂಪಾಯಿಯನ್ನು ಯಾವ ಹಣದಿಂದ ಕೊಡುತ್ತೀರಿ? ಯಾರಾದರೂ ಜಾರ್ಜ್ ಸೊರೊಸ್ ಅಂಥವರು ನಿಮಗೆ ಹಣ ಕೊಡ್ತಾರಾ? ಎಂದು ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದರು. ಕರ್ನಾಟಕದ ಬಜೆಟ್‍ನಲ್ಲಿ ಇದನ್ನು ಕೊಡಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು. ಈ ವರ್ಷ ನಮ್ಮ ಸರಕಾರ 3 ಲಕ್ಷ ಕೋಟಿ ರೂಪಾಯಿಯ ಬಜೆಟ್ ಮಂಡಿಸಿದೆ. ಸುಮಾರು 2.5 ಲಕ್ಷ ಕೋಟಿ ರೂಪಾಯಿ ಸಂಗ್ರಹ ಆಗುವ ಮಾಹಿತಿ ಇದೆ. ಅಥವಾ 3 ಲಕ್ಷ ಕೋಟಿಯೇ ಸಂಗ್ರಹ ಆಗಲಿ; ಈಗ ಕಾಂಗ್ರೆಸ್‍ನವರು ಕೊಟ್ಟ ಭರವಸೆಗಳನ್ನು ಈಡೇರಿಸಲು 70-75 ಸಾವಿರ ಕೋಟಿ ಬೇಕು.

ಯಡಿಯೂರಪ್ಪ ಅವರ ನೇತೃತ್ವದಲ್ಲಿ ಘೋಷಣೆಯಂತೆ ಸಂಧ್ಯಾ ಸುರಕ್ಷಾ ಯೋಜನೆಯಡಿ ಅಜ್ಜ, ಅಜ್ಜಿಗೆ ತಲಾ 1200 ಸೇರಿ 2400 ರೂಪಾಯಿ ನಾವು ಕೊಡುತ್ತಿದ್ದೇವೆ. ನಿಮ್ಮದು ಭರವಸೆ ಮಾತ್ರ. ನಾವು ನಿಜವಾಗಲೂ ಕೊಡುತ್ತಿದ್ದೇವೆ ಎಂದು ತಿಳಿಸಿದರು. ಕಾಂಗ್ರೆಸ್ಸಿಗರು ಇದೇ ರೀತಿ ರಾಜಸ್ಥಾನದಲ್ಲೂ ಗ್ಯಾರಂಟಿ ಕಾರ್ಡ್ ಹಂಚಿದ್ದರು. 2018ರ ಚುನಾವಣೆಗೆ ಮೊದಲು ನಿರುದ್ಯೋಗಿ ಯುವಕರಿಗೆ 3,500 ರೂಪಾಯಿ ಭತ್ಯೆ ಕೊಡುವುದಾಗಿ ಗ್ಯಾರಂಟಿ ಕಾರ್ಡ್ ಕೊಟ್ಟು ತಿಳಿಸಿದ್ದಿರಿ. ಆದರೆ, ಇವತ್ತಿನ ತನಕ ಅದನ್ನು ಈಡೇರಿಸಿಲ್ಲ. ಛತ್ತೀಸ್‍ಗಡದಲ್ಲೂ ಗ್ಯಾರಂಟಿ ಕಾರ್ಡ್ ಕೊಟ್ಟಿದ್ದೀರಿ. ನಿಮ್ಮ ಅಧಿಕಾರ ಇದ್ದರೂ ಅದನ್ನು ಈಡೇರಿಸಿಲ್ಲ ಎಂದು ಟೀಕಿಸಿದರು. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಈ ಕುರಿತು ಉತ್ತರಿಸಲಿ ಎಂದು ಆಗ್ರಹಿಸಿದರು.

ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿ ಆದಾಗ ಭರವಸೆ, ಗ್ಯಾರಂಟಿ ಕಾರ್ಡ್ ಕೊಡಲಿಲ್ಲ. ಬಿಜಾಪುರದಲ್ಲಿ ಅಜ್ಜಿ ಒಬ್ಬರು ಕಾಲಿಗೆ ಬಿದ್ದು, ‘ನನಗೆ ಗಂಡ ಇದ್ದಾರೆ, ಮಕ್ಕಳಿದ್ದಾರೆ, ಊಟ ಮಾಡಲು ಹಣ ಇಲ್ಲ’ ಎಂದಾಗ ‘ತಾಯಿ ನಿನಗೂ ಏನಾದ್ರೂ ಮಾಡುತ್ತೇನೆ’ ಎಂದು ತಿಳಿಸಿ ವಾಪಸ್ ಬಂದರು. ನಂತರದ ಕ್ಯಾಬಿನೆಟ್ ಸಭೆಯಲ್ಲಿ ಸಂಧ್ಯಾ ಸುರಕ್ಷಾ ಜಾರಿಗೊಳಿಸಿ ಅಜ್ಜ- ಅಜ್ಜಿಗೆ ಒಂದು ಮನೆಗೆ 2400 ಸಿಗುವಂತೆ ಮಾಡಿದವರು ಯಡಿಯೂರಪ್ಪ. ರಾಮಕೃಷ್ಣ ಹೆಗಡೆಯವರ ಕಾಲದಿಂದ ವಿಧವಾ ವೇತನ 75 ರೂಪಾಯಿಯಿಂದ ಆರಂಭವಾಗಿತ್ತು. ನೀವು ಹಲವು ವರ್ಷಗಳ ಆಡಳಿತ ನಡೆಸಿದ ಬಳಿಕ ಅದು 200 ರೂಪಾಯಿಗೆ ಬಂದು ನಿಂತಿತ್ತು. ವಿಧವಾ ವೇತನ ಹೆಚ್ಚಿಸಿ 1 ಸಾವಿರ ನೀಡುತ್ತಿರುವುದು ನಮ್ಮ ಸರಕಾರ ಎಂದ ಅವರು, ಕಾಂಗ್ರೆಸ್‍ನವರು ಯಾವ ಹೆಣ್ಮಕ್ಕಳಿಗೆ 2 ಸಾವಿರ ಕೊಡುತ್ತಾರೆ? ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಕೊಡುತ್ತಾರಾ? ಎಲ್ಲರಿಗೂ ಕೊಡುತ್ತಾರಾ? ಅಥವಾ ವಿಧವೆಯರಿಗೆ ಮಾತ್ರ ಕೊಡಲಿದ್ದಾರಾ ಎಂದು ಪ್ರಶ್ನೆಗಳನ್ನು ಮುಂದಿಟ್ಟರು.

2000- 2001ರಲ್ಲಿ ನಿರುದ್ಯೋಗಿ ಯುವಕರಿಗೆ 5 ಸಾವಿರ ಕೊಡುವುದಾಗಿ ಕಾಂಗ್ರೆಸ್ ಭರವಸೆ ಕೊಡಲಾಗಿತ್ತು. ಅದಕ್ಕಾಗಿ ನಾವು ಹೋರಾಟವನ್ನೂ ಮಾಡಿದ್ದೆವು. ಆದರೆ, ಅದು ಈಡೇರಲಿಲ್ಲ ಎಂದು ಟೀಕಿಸಿದರು. ಸುಳ್ಳು ಹೇಳುವುದಕ್ಕೂ, ಮೋಸ ಮಾಡುವುದಕ್ಕೂ ಒಂದು ಮಿತಿ ಇರಲಿ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿಗರಿಗೆ ಚುನಾವಣೆ ಬಂದಾಗ ಬಡವರ, ಹೆಣ್ಮಕ್ಕಳ, ನಿರುದ್ಯೋಗಿ ಯುವಕರ ನೆನಪಾಗುತ್ತದೆ ಎಂದು ಆರೋಪಿಸಿದ ಅವರು, ಪ್ರಧಾನಿಯವರು ಖಾಲಿ ಹುದ್ದೆ ಭರ್ತಿ ಮಾಡುವ ಮೂಲಕ ಕ್ರಾಂತಿ ಮಾಡುತ್ತಿದ್ದಾರೆ. ಇದು ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ರೈಲ್ವೆಯಲ್ಲಿ ಉದ್ಯೋಗ ಪತ್ರ ಹಂಚುವ ಕೆಲಸ ನಡೆದಿದ್ದು, ನಾನು ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಪ್ರಧಾನಿಯವರು 10 ಲಕ್ಷ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದು, ಅದನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ ಎಂದರು. ಕಾಂಗ್ರೆಸ್ಸಿಗರು ಈಗ ಇರುವ ಯೋಜನೆಗಳನ್ನು ನಿಲ್ಲಿಸಿ ಹೊಸ ಯೋಜನೆ ಜಾರಿಗೊಳಿಸಲಿದ್ದಾರೆಯೇ ಎಂದು ಕೇಳಿದರು. ಯಡಿಯೂರಪ್ಪನವರ ಸುವರ್ಣ ಭೂಮಿ ಯೋಜನೆಯನ್ನು ಸಿದ್ದರಾಮಯ್ಯನವರು 2013ರಲ್ಲಿ ಸ್ಥಗಿತಗೊಳಿಸಿ, ಶಾದಿ ಭಾಗ್ಯ ಜಾರಿಗೊಳಿಸಿದರು. ಸಿದ್ದರಾಮಯ್ಯನವರು ಆಡಳಿತ ಅವಧಿಯ ನಾಲ್ಕೂವರೆ ವರ್ಷಗಳ ಕಾಲ 5 ಕೆಜಿ ಅಕ್ಕಿಯನ್ನಷ್ಟೇ ಕೊಟ್ಟಿದ್ದರು. ಕೊನೆಯ ಮೂರ್ನಾಲ್ಕು ತಿಂಗಳು 7 ಕೆಜಿ ಅಕ್ಕಿ ಕೊಡಲಾಗಿತ್ತು ಎಂದು ನೆನಪಿಸಿದರು. ಆಗಲೂ ಕೇಂದ್ರ ಸರಕಾರವು ಪ್ರತಿ ಕೆಜಿಗೆ 32 ರೂಪಾಯಿಯಂತೆ ಅಕ್ಕಿ ಖರೀದಿಸಿ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ 3 ರೂಪಾಯಿಗೆ ಕೊಡುತ್ತಿತ್ತು. ಕೇಂದ್ರವು ಗೋಧಿ ಪ್ರತಿ ಕೆಜಿಗೆ 22 ರೂಪಾಯಿಗೆ ಖರೀದಿಸಿ ರಾಜ್ಯ ಸರಕಾರಗಳಿಗೆ 2 ರೂಪಾಯಿಗೆ ಕೊಡುತ್ತಿದೆ. ಕೇಂದ್ರ ಸರಕಾರ ನಾವು ಪಡೆಯುವ ರೇಷನ್‍ಗಾಗಿ 1 ಲಕ್ಷ 80 ಸಾವಿರ ಕೋಟಿಯನ್ನು ಪ್ರತಿವರ್ಷ ಅಕ್ಕಿ ಮತ್ತು ಗೋಧಿ ಖರೀದಿಗೆ ಬಳಸುತ್ತಿದೆ.

ಸಿದ್ದರಾಮಯ್ಯನವರು ಆವತ್ತೂ ಬೋರ್ಡ್ ಹಾಕಿಕೊಂಡರು; ಅನ್ನ ಭಾಗ್ಯ ಯೋಜನೆಯ ಸಿದ್ದರಾಮಯ್ಯನವರು ಎಂದು ಬೋರ್ಡ್ ಇತ್ತು. ಆದರೆ, ಮೋದಿಯವರು ಅಕ್ಕಿಗೆ 29 ರೂ, ಗೋಧಿಗೆ 20 ರೂಪಾಯಿ ಕೊಡುತ್ತಿದ್ದು ಅವರ ಹೆಸರನ್ನು ಹಾಕಿಕೊಳ್ಳಲಿಲ್ಲ ಎಂದು ಆಕ್ಷೇಪಿಸಿದರು. ಮೋದಿಯವರಿಗೆ ನಿಮ್ಮ ಪ್ರಚಾರದ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿನ ಮಾನಸಿಕತೆ ಬಗ್ಗೆ ನಾವು ಹೇಳುತ್ತಿದ್ದೇವೆ. ಇವತ್ತಿಗೂ ಎಲ್ಲ ರಾಜ್ಯ ಸರಕಾರಗಳಿಗೆ ಅದೇ ಮೊತ್ತದಷ್ಟು ಕೇಂದ್ರವು ಖರ್ಚು ಮಾಡಿ ಅಕ್ಕಿ, ಗೋಧಿ ಕೊಡುತ್ತಿದೆ ಎಂದರು.

ಗರೀಬ್ ಕಲ್ಯಾಣ್ ಅನ್ನ ಯೋಜನೆಗೆ ಉಚಿತ ಅಕ್ಕಿ, ಗೋಧಿ ನೀಡಲು 2 ಲಕ್ಷ 80 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಸರಕಾರವು ಖರ್ಚು ಮಾಡಿದೆ ಎಂದು ತಿಳಿಸಿದರು. ಮಧ್ಯಪ್ರದೇಶದಲ್ಲಿ ಕಮಲನಾಥ್ ಅವರು ಅಧಿಕಾರಕ್ಕೆ ಬರುವುದಕ್ಕೆ ಮೊದಲು ನಿರುದ್ಯೋಗಿ ಯುವಕರಿಗೆ ಉದ್ಯೋಗ ಕೊಡುವಂಥ, ಅವರಿಗೆ ಮಾಸಾಶನ ಮತ್ತು ಮಹಿಳೆಯರಿಗೂ ಹಣ ಕೊಡುವ, ಯುವತಿಯರಿಗೆ ದ್ವಿಚಕ್ರ ವಾಹನ ಕೊಡುವ ಭರವಸೆ ಕೊಟ್ಟಿದ್ದರು. ಆದರೆ, ಅದು ಕೂಡ ಈಡೇರಲಿಲ್ಲ ಎಂದು ಟೀಕಿಸಿದರು.

ರಾಜ್ಯದಲ್ಲಿ ಈಗ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಚೀಟಿ ಅಂಟಿಸಿ 2 ಸಾವಿರ ಸಿಗುತ್ತದೆ ಎಂದು ನಂಬಿಸಲು ಯತ್ನಿಸುತ್ತಿದ್ದಾರೆ. ಚುನಾವಣೆ ಘೋಷಣೆಯೇ ಆಗಿಲ್ಲ; ಇವರಿನ್ನೂ ಅಧಿಕಾರಕ್ಕೆ ಬಂದಿಲ್ಲ, ಅಧಿಕಾರ ಪಡೆದ ರಾಜ್ಯಗಳಲ್ಲಿ ಕೊಟ್ಟಿಲ್ಲ, ಆದರೆ, ಕರ್ನಾಟಕದಲ್ಲಿ 2 ಸಾವಿರ ಕೊಡುವ ಗ್ಯಾರಂಟಿ ಕಾರ್ಡ್ ಮತ್ತು ಅರ್ಜಿ ನೀಡುವುದನ್ನು ನೋಡಿದ್ದೇವೆ ಎಂದು ಆಕ್ಷೇಪಿಸಿದರು. ಮಹಿಳೆಯರಿಗೆ 2 ಸಾವಿರ ರೂಪಾಯಿ ಕೊಡ್ತೀವಿ, 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ, ಪದವಿ ಪಡೆದವರಿಗೆ 3500 ರೂಪಾಯಿ ಮತ್ತು ಡಿಪ್ಲೊಮಾ ಪಡೆದ ಯುವಕರಿಗೆ 1500 ರೂಪಾಯಿ ನೀಡುತ್ತೇವೆ ಎಂದು ಕಾಂಗ್ರೆಸ್‍ನವರು ಗ್ಯಾರಂಟಿ ಕೊಟ್ಟಿದ್ದಾರೆ.

ದೇಶವನ್ನು 60 ವರ್ಷದಷ್ಟು ಕಾಲ ಆಳ್ವಿಕೆ ಮಾಡಿದ ಪಕ್ಷ ಇವರದು ಎಂದು ನಾವು ಅಂದುಕೊಂಡಿದ್ದೇವೆ. ಕರ್ನಾಟಕದಲ್ಲೂ ಸುಮಾರು 60 ವರ್ಷ ಕಾಂಗ್ರೆಸ್ ಆಡಳಿತ ನಡೆಸಿದೆ. ದೆಹಲಿ, ಬೆಂಗಳೂರಿನಿಂದ ಹಳ್ಳಿಯಿಂದ ದಿಲ್ಲಿ ತನಕ ಕಾಂಗ್ರೆಸ್ ಆಡಳಿತ ಇಂದಿರಾ ದಶಕದಲ್ಲಿ ಇತ್ತು ಎಂದು ನೆನಪಿಸಿದರು. ಕಾಂಗ್ರೆಸ್‍ನ ಟಿಕೆಟ್ ಅನ್ನು ಲೈಟ್ ಕಂಬಕ್ಕೆ ಕೊಟ್ಟರೂ ಅದು ಗೆದ್ದು ಬರುತ್ತದೆ ಎಂದು ನಾವು ತಮಾಷೆಗೆ ಹೇಳುತ್ತಿದ್ದೆವು. ಅಂಥ ಸ್ಥಿತಿಯಲ್ಲಿದ್ದ ಕಾಂಗ್ರೆಸ್, ದೇಶದ ಎಲ್ಲ ಕಡೆ ಸುಳ್ಳು ಭರವಸೆಗಳನ್ನು ಕೊಟ್ಟು ಇವತ್ತು ಅವರು ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಜಾಗದಲ್ಲೂ ಇಲ್ಲ ಎಂಬಂತಾಗಿದೆ. ಹಿಂದೆ ದೇಶದ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಆಡಳಿತವಿತ್ತು. ಆದರೆ, ಅವರು ಇವತ್ತು ಕೆಲವೇ ಕೆಲವು ಸೀಮಿತ ರಾಜ್ಯಗಳಲ್ಲಿ ಆಡಳಿತ ಮಾಡುವ ಪರಿಸ್ಥಿತಿಗೆ ಇಳಿದಿದ್ದಾರೆ ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಂದೀಶ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ನ.28: ನರೇಂದ್ರ ಎಸ್ ಗಂಗೊಳ್ಳಿ ಅವರ ‘ನಿಭೃತ’ ಪತ್ತೇದಾರಿ ಕಾದಂಬರಿ ಬಿಡುಗಡೆ

ಉಡುಪಿ, ನ.23: ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಮತ್ತು...

ವಯನಾಡ್: ಪ್ರಿಯಾಂಕಾ ಗಾಂಧಿಗೆ ಐತಿಹಾಸಿಕ ಗೆಲುವು

ವಯನಾಡ್, ನ.23: ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಾಯಕಿ...

ಉಪಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್- ನಮ್ಮ ಕಾರ್ಯಕರ್ತರ ಅವಿರತ ಶ್ರಮದ ಗೆಲುವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ನ.23: ಕರ್ನಾಟಕದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್...

ಮಹಾರಾಷ್ಟ್ರದ ಗೆಲುವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಗೆಲುವು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ನ.23: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಗೆಲುವು ಉತ್ತಮ...
error: Content is protected !!