ಉಡುಪಿ, ಮಾ. 13: ಕೆಪಿಸಿಸಿ ಕಾರ್ಯಾಧ್ಯಕ್ಷರು, ಉಡುಪಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿಗಳಾಗಿದ್ದ ಸರಳ ಸಜ್ಜನ ವ್ಯಕ್ತಿತ್ವದ ಆರ್. ಧ್ರುವನಾರಾಯಣ್ ನಿಧನರಾಗಿರುವುದು ನಮ್ಮೆಲ್ಲರಿಗೂ ದಿಗ್ಭ್ರಮೆ ಉಂಟು ಮಾಡಿದೆ. ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ ಸಹ ಜಿಲ್ಲಾ ಉಸ್ತುವಾರಿ ನೆಲೆಯಲ್ಲಿ ಭಾಗವಹಿಸಿ ಪಕ್ಷಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪಕ್ಷ ಸಂಘಟನೆಯ ಬಗ್ಗೆ ಧ್ರುವನಾರಾಯಣ್ ಅವರು ಮಾರ್ಗದರ್ಶನ ನೀಡುತ್ತಿದ್ದರು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ಆರ್. ಧ್ರುವನಾರಾಯಣರವರನ್ನು ನೆನಪಿಸಿಕೊಂಡರು. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಆರ್. ಧ್ರುವನಾರಾಯಣ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಆರ್. ಧ್ರುವನಾರಾಯಣ್ ರವರು ರಾಜಕೀಯಕ್ಕೆ ಬಂದವರು. ಅವರಲ್ಲಿ ಗಟ್ಟಿತನವಿತ್ತು ನೇರ ನುಡಿ ಅವರ ಸ್ವಭಾವವಾಗಿತ್ತು. ಸಾಮಾನ್ಯ ಕಾರ್ಯಕರ್ತನೊಂದಿಗೂ ನಿಕಟ ಸಂಬಂಧವನ್ನು ಹೊಂದಿರುವ ಅಪರೂಪದ ರಾಜಕಾರಣಿ ಯಾಗಿ ಒಂದಿನಿತೂ ಅಹಂ ಇಲ್ಲದ ಸರಳ ಸಜ್ಜನ ಅಜಾತಶತ್ರು ವ್ಯಕ್ತಿತ್ವ ಅವರದ್ದಾಗಿತ್ತು. ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ ಗಫೂರ್, ಮುಖಂಡರಾದ ದಿನೇಶ್ ಪುತ್ರನ್ˌ ವೆರೋನಿಕಾ ಕರ್ನೆಲಿಯೋˌ ಗೀತಾ ವಾಗ್ಳೆˌ ಬಿ. ನರಸಿಂಹಮೂರ್ತಿ, ಭಾಸ್ಕರ ರಾವ್ ಕಿದಿಯೂರುˌ ಹರೀಶ್ ಕಿಣಿˌ ಅಣ್ಣಯ್ಯ ಸೇರಿಗಾರ್, ಬಿ. ಕುಶಲ ಶೆಟ್ಟಿˌ ಶಂಕರ್ ಕುಂದರ್ˌ ಶ್ಯಾಮಲಾ ಭಂಡಾರಿˌ ಪ್ರಖ್ಯಾತ ಶೆಟ್ಟಿˌ ಕಿಶನ್ ಹೆಗ್ಡೆ ಕೊಳ್ಕೆಬೈಲ್ˌ ರಮೇಶ್ ಕಾಂಚನ್ˌ ದಿನಕರ್ ಹೇರೂರುˌ ಶಿವಾಜಿ ಸುವರ್ಣˌ ರೋಶನಿ ಒಲಿವರಾˌ ಪ್ರಶಾಂತ್ ಜತ್ತನ್ನˌ ಕೀರ್ತಿ ಶೆಟ್ಟಿˌ ಹರೀಶ್ ಶೆಟ್ಟಿ ಪಾಂಗಾಳˌ ರೋಶನ್ ಶೆಟ್ಟಿˌ ಇಸ್ಮಾಯಿಲ್ ಅತ್ರಾಡಿˌ ಜಯ ಕುಮಾರ್ˌ ಕಿಶೋರ್ ಕುಮಾರ್ ಎರ್ಮಾಳ್ˌ ಸಂಜಯ ಆಚಾರ್ಯ ಉಪಸ್ಥಿತರಿದ್ದರು.