ಮಂಗಳೂರು, ಮಾ. 11: ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು ಇದಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್) ‘ಎ’ ಶ್ರೇಣಿಯ ಮಾನ್ಯತೆ ಲಭಿಸಿದೆ.
ಮಾರ್ಚ್ 2 ಮತ್ತು 3 ರಂದು ಕಾಲೇಜಿಗೆ ಭೇಟಿ ನೀಡಿದ್ದ ನ್ಯಾಕ್ ನ ತ್ರಿಸದಸ್ಯ ಸಮಿತಿ ಇಲ್ಲಿನ ಕಳೆದ 5 ವರ್ಷಗಳ ಪ್ರಗತಿಯ, ಶೈಕ್ಷಣಿಕ ಮತ್ತು ಪಠ್ಯೇತರ ಕಾರ್ಯಕ್ರಮಗಳ ಮತ್ತು ಸೌಲಭ್ಯಗಳ ಸಮಗ್ರ ಪರಿಶೀಲನೆ ನಡೆಸುವುದರ ಜೊತೆಗೆ ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು, ಹೆತ್ತವರು ಮತ್ತು ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷರಾಗಿರುವ ಕಾಲೇಜು ಅಭಿವೃದ್ಧಿ ಸಮಿತಿಯ ಜೊತೆ ವಿಚಾರ ವಿನಿಮಯ ನಡೆಸಿ ತನ್ನ ರಹಸ್ಯ ವರದಿ ಹಾಗೂ ಅಂಕಗಳನ್ನು ನ್ಯಾಕ್ ಗೆ ಸಲ್ಲಿಸಿತ್ತು. ಈ ವರದಿ ಮತ್ತು ಅಂಕಗಳ ಆಧಾರದಲ್ಲಿ ಈ ಉನ್ನತ ಶ್ರೇಣಿಯ ಮಾನ್ಯತೆ ಪ್ರಾಪ್ತವಾಗಿರುತ್ತದೆ.
ಮಹಾರಾಷ್ಟ್ರದ ನಿವೃತ್ತ ಉಪಕುಲಪತಿ ಪ್ರೊ. ಎನ್. ವಿ. ಕಲ್ಯಾಣಕರ್ ಸಮಿತಿಯ ಅಧ್ಯಕ್ಷರಾಗಿದ್ದರು. ಉತ್ತಮ ಬೋಧಕ ಮತ್ತು ಬೋಧಕೇತರ ತಂಡ, ವಿದ್ಯಾರ್ಥಿಗಳು, ಕಾಲೇಜು ಅಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು ಮತ್ತು ಹೆತ್ತವರ ಸಹಕಾರ ಮತ್ತು ಪರಿಶ್ರಮದಿಂದ ಇದು ಸಾಧ್ಯವಾಗಿದೆ.