ಮಲ್ಪೆ, ಮಾ. 2: ಕರಾವಳಿ ಜಿಲ್ಲೆಯ ಐಎಎಸ್, ಐಪಿಎಸ್, ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮೀನು ಮಾರಾಟ ಫೆಡರೇಶನ್ ವತಿಯಿಂದ ನಾಡೋಜ ಡಾ. ಜಿ ಶಂಕರ್ ಹಾಗೂ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಸಹಯೋಗದಲ್ಲಿ ಉಚ್ಚಿಲದಲ್ಲಿ ತರಬೇತಿ ಕೇಂದ್ರವನ್ನು ಶೀಘ್ರದಲ್ಲೇ ಆರಂಭಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿರುವುದಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದರು. ಮೀನು ಮಾರಾಟ ಫೆಡರೇಶನ್ ವತಿಯಿಂದ ಮಲ್ಪೆ ಏಳೂರು ಮೊಗವೀರ ಭವನದಲ್ಲಿ ಆಯೋಜಿಸಿದ್ದ ಸದಸ್ಯ ಗ್ರಾಹಕರಿಗೆ ಪ್ರೋತ್ಸಾಹಕ ಉಡುಗೊರೆ, ಹಾಗೂ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದ ಅಧ್ಯಕ್ಷತೆ ಅವರು ವಹಿಸಿ ಮಾತನಾಡಿದರು.
ಫೆಡರೇಶನ್ ವತಿಯಿಂದ 1.70 ಕೋಟಿ ವೆಚ್ಚದಲ್ಲಿ ಉಡುಪಿ ಭಾಗದ 850 ವಿದ್ಯಾರ್ಥಿಗಳಿಗೆ ಸುಮಾರು 16 ಲಕ್ಷ ಮೌಲ್ಯದ ಪ್ರತಿಭಾ ಪುರಸ್ಕಾರ, 250 ಬೋಟ್ ಮಾಲೀಕರಿಗೆ 4 ಲಕ್ಷ ಮೌಲ್ಯದ ಪ್ರೋತ್ಸಾಹಕ ಉಡುಗೊರೆ, 300 ಗ್ರಾಹಕ ಬೋಟ್ ಮಾಲೀಕರಿಗೆ 1.50 ಕೋಟಿ ಮೌಲ್ಯದ ಪ್ರೋತ್ಸಾಹ ಧನ ವಿತರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯ ಲಾಭಾಂಶದಲ್ಲಿ ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಸುಮಾರು 3 ಕೋಟಿ ವೆಚ್ಚದಲ್ಲಿ ಸಮಾಜ ಮುಖಿ ಕಾರ್ಯಕ್ರಮಗಳಿಗೆ ವಿನಿಯೋಗಿಸಿದ ಹೆಗ್ಗಳಿಕೆ ಸಂಸ್ಥೆ ಪಾತ್ರವಾಗಿದೆ ಎಂದು ಯಶ್ಪಾಲ್ ಸುವರ್ಣ ಹೇಳಿದರು.
ಉದ್ಘಾಟನೆ ನೆರವೇರಿಸಿದ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷರದ ಜಯ ಸಿ ಕೋಟ್ಯಾನ್ ಮಾತನಾಡಿ, ನಷ್ಟದ ಸುಳಿಯಲ್ಲಿ ಸಿಲುಕಿದ ಸಂಸ್ಥೆಯ ಚುಕ್ಕಾಣಿಯನ್ನು ಯಶ್ಪಾಲ್ ಸುವರ್ಣ ವಹಿಸಿಕೊಂಡು ಹಂತ ಹಂತವಾಗಿ ಲಾಭದಾಯಕ ಸಂಸ್ಥೆಯನ್ನಾಗಿಸಿ ಕರಾವಳಿ ಜಿಲ್ಲೆಯ ಮೀನುಗಾರರ ಆಶಾಕಿರಣವಾಗಿ ಗುರುತಿಸಿಕೊಂಡಿರುವ ಸಂಸ್ಥೆಯ ಮೂಲಕ ಪ್ರತಿಭಾ ಪುರಸ್ಕಾರ, ಆರೋಗ್ಯ ಸುರಕ್ಷಾ ಕಾರ್ಡ್ ನಂತಹ ಸಮಾಜ ಮುಖಿ ಚಿಂತನೆಯ ಕಾರ್ಯಗಳು ನಿತ್ಯ ನಿರಂತವಾಗಿ ಮೂಡಿಬರಲಿ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ, ಉದ್ಯಮಿ ಆನಂದ ಪಿ. ಸುವರ್ಣ, ಮೊಗವೀರ ಯುವ ಸಂಘಟನೆಯ ಜಿಲ್ಲಾಧ್ಯಕ್ಷ ರಾಜೇಂದ್ರ ಹಿರಿಯಡ್ಕ, ಮೀನುಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ವಿವೇಕ್, ವಿವಿಧ ಮೀನುಗಾರಿಕಾ ಸಂಘಗಳ ಪದಾಧಿಕಾರಿಗಳಾದ ಸಾಧು ಸಾಲ್ಯಾನ್, ರತ್ನಾಕರ ಸಾಲ್ಯಾನ್, ಸುಭಾಷ್ ಮೆಂಡನ್, ಸತೀಶ್ ಕುಂದರ್, ರಾಮಚಂದ್ರ ಕುಂದರ್, ಕಿಶೋರ್ ಡಿ. ಸುವರ್ಣ, ದಯಾಕರ ವಿ ಸುವರ್ಣ, ರವಿರಾಜ್ ಸುವರ್ಣ, ಮೋಹನ್ ಕುಂದರ್, ನಾಗರಾಜ ಬಿ. ಕುಂದರ್, ವಿನಯ ಕರ್ಕೇರ, ಆನಂದ ಖಾರ್ವಿ ಉಪ್ಪುಂದ, ಬೇಬಿ ಎಚ್ ಸಾಲ್ಯಾನ್, ಉಷಾ ರಾಣಿ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮೊಗವೀರ ಹಾಗೂ ಫೆಡರೇಶನ್ ಆಡಳಿತ ಮಂಡಳಿಯ ನಿರ್ದೇಶಕರು ಉಪಸ್ಥಿತರಿದ್ದರು.