ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾದವರು ಈ ಹೆಸರನ್ನು ಮಿಸ್ ಮಾಡಲು ಸಾಧ್ಯವೇ ಇಲ್ಲ. ಆಕೆ ಎರಡನೇ ಬಾರಿ ವಿಶ್ವದ ಅತ್ಯಂತ ಪ್ರತಿಭಾನ್ವಿತ ವಿದ್ಯಾರ್ಥಿ ಪ್ರಶಸ್ತಿ ಗೆದ್ದಿದ್ದಾರೆ. ಅದು ಕೂಡ ವಿಶ್ವದ 76 ದೇಶಗಳ 19,000 ವಿದ್ಯಾರ್ಥಿಗಳನ್ನು ಹಿಂದೆ ಹಾಕಿ! ಆಕೆ ಭಾರತದ ಮೂಲದವರು ಅನ್ನುವಾಗ ನಮ್ಮ ಕಾಲರ್ ನೆಟ್ಟಗಾಗುವುದು ಖಂಡಿತ!
ನತಾಶಾ ತಂದೆ ಮತ್ತು ತಾಯಿ ಚೆನ್ನೈ ಮೂಲದವರು. ಸದ್ಯಕ್ಕೆ ಅವರು ಅಮೆರಿಕಾದ ನ್ಯೂಜರ್ಸಿಯಲ್ಲಿ ನೆಲೆಸಿದ್ದಾರೆ. ನತಾಶಾ ಅಲ್ಲಿಯ ಗಾಡಿನೀರ್ ಮಿಡಲ್ ಸ್ಕೂಲ್ ವಿದ್ಯಾರ್ಥಿನಿ. ಆಕೆ ಶೈಕ್ಷಣಿಕ ಸಾಧನೆಯಲ್ಲಿ ಕೂಡ ತುಂಬಾ ಮುಂದೆ ಇದ್ದಾಳೆ. ಬಿಡುವಿನ ಅವಧಿಯಲ್ಲಿ ಸಿಕ್ಕಾಪಟ್ಟೆ ಓದುತ್ತಾಳೆ. ಹಾಗೆಯೇ ಸಂಗೀತ ಅವಳ ಪ್ಯಾಶನ್. ಗಿಟಾರ್, ವಯೋಲಿನ್, ಪಿಯಾನೋ ತರಗತಿಗಳನ್ನು ಅವಳು ಮಿಸ್ ಮಾಡದೆ ಕಲಿಯುತ್ತಿದ್ದಾಳೆ.
ವಯಸ್ಸಿಗೆ ಮೀರಿದ ಪ್ರಬುದ್ಧತೆ ಆಕೆಯದ್ದು. ಆಕೆಯ ಹೆತ್ತವರು ಆಕೆಗೆ ಸದಾ ಬೆಂಗಾವಲಾಗಿ ನಿಂತಿದ್ದಾರೆ, ಮಾತ್ರವಲ್ಲ ಅವಳಿಗೆ ಬೇಕಾದ ವೈಚಾರಿಕ ಸ್ವಾತಂತ್ರ್ಯವನ್ನು ನೀಡಿದ್ದಾರೆ. ಆಕೆಯ ವಯಸ್ಸು ಕೇವಲ 13 ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ ಆಗಿದೆ!
ಈ ಪ್ರಶಸ್ತಿಯ ಆಯ್ಕೆ ಹೇಗೆ? ನತಾಶಾ ಗೆದ್ದಿರುವ ಈ ಅಂತಾರಾಷ್ಟ್ರೀಯ ಸ್ಪರ್ಧೆಯನ್ನು ವ್ಯವಸ್ಥೆ ಮಾಡುತ್ತಿರುವ ಸಂಸ್ಥೆ ‘ಜಾನ್ಸ್ ಹಾಕಿನ್ಸ್ ಸೆಂಟರ್ ಫಾರ್ ಟಾಲೆಂಟಡ್ ಯೂಥ್’. ಜಗತ್ತಿನ 76 ದೇಶಗಳ 15,000 ಹದಿಹರೆಯದ ವಿದ್ಯಾರ್ಥಿಗಳನ್ನು ಈ ಸಂಸ್ಥೆಯು ವಿವಿಧ ವಿಧಾನಗಳ ಮೂಲಕ ಪರೀಕ್ಷೆಗೆ ಒಡ್ಡಿತ್ತು. ಅಲ್ಲಿ ಲಿಖಿತ ಪರೀಕ್ಷೆಗಳ ಜೊತೆಗೆ ಬಾಯ್ದೆರೆ ಪ್ರಶ್ನೆಗಳು, ಪ್ರಾಜೆಕ್ಟ್ ರಚನೆ ಮತ್ತು ಸಂದರ್ಶನಗಳು ಇದ್ದವು. ಪ್ರತೀ ಹಂತದಲ್ಲಿಯೂ ವಿದ್ಯಾರ್ಥಿಗಳ ಅಂಕಗಳನ್ನು ವೈಜ್ಞಾನಿಕವಾಗಿ ದಾಖಲೆ ಮಾಡಲಾಗುತ್ತಿತ್ತು. ಪ್ರತೀ ಹಂತದಲ್ಲೂ ನತಾಷಾ ಗೆದ್ದಿದ್ದಾರೆ. CTY ಸಂಸ್ಥೆಯ ಕಾರ್ಯಕಾರಿ ನಿರ್ವಾಹಕ ನಿರ್ದೇಶಕಿ ಡಾಕ್ಟರ್ ಆಮಿ ಶೆಲ್ಟನ್ ಆಕೆಯ ಪ್ರತಿಭೆಗೆ ವಿಸ್ಮಯ ಪಟ್ಟಿದ್ದಾರೆ.
ಕಳೆದ ವರ್ಷ ಕೂಡ ಆಕೆ ಗೆದ್ದಿದ್ದರು. CTY ಸಂಸ್ಥೆಯಿಂದ ನಡೆದ 2021ರ ಸ್ಪರ್ಧೆಯಲ್ಲಿ ಕೂಡ ಆಕೆ ವಿನ್ನರ್ ಆಗಿದ್ದರು. ಆಗಲೂ 19,000 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಇದ್ದರು. ಆಗಲೂ ಆಕೆಯ ಪ್ರತಿಭೆಗೆ ವಿಶ್ವಮಾನ್ಯತೆ ದೊರೆತಿತ್ತು! ಆಗಲೂ ಜಾಗತಿಕ ಮಟ್ಟದ ಪತ್ರಿಕೆಗಳು ಆಕೆಯನ್ನು ಹೊಗಳಿ ಬರೆದಿದ್ದವು. ವಾಸ್ತು ಶಿಲ್ಪ ಮತ್ತು ವಿಜ್ಞಾನ ಆಕೆಯ ಆಸಕ್ತಿಯ ವಿಷಯಗಳು. ಮುಂದೆ ವಾಸ್ತು ಶಿಲ್ಪದಲ್ಲಿ ಇಂಜಿನಿಯರಿಂಗ್ ಓದಬೇಕು ಅಂತ ಅವಳ ಆಸೆ ಇದೆ.
ನತಾಶಾ ಹೆತ್ತವರು ಗ್ರೇಟ್! ನನ್ನ ಹೆತ್ತವರು ನನಗೆ ಯಾವ ವಿಷಯದಲ್ಲಿಯೂ ಒತ್ತಡ ಹಾಕಲಿಲ್ಲ. ಈ ಪರೀಕ್ಷೆಗೆ ರಿಜಿಸ್ಟರ್ ಮಾಡುವುದು ಕೂಡ ನನ್ನದೇ ಪ್ಲಾನ್ ಆಗಿತ್ತು. ಶಾಲೆಯ ಪಾಠವನ್ನು ಓದಲು ಕೂಡ ನನಗೆ ಹೆತ್ತವರು ಒತ್ತಡವನ್ನು ಹಾಕಿಯೇ ಇಲ್ಲ! ಮಗಳ ಪ್ರತೀಯೊಂದು ಪ್ರತಿಭೆಗಳಿಗೆ ಅಪ್ಪ ಮತ್ತು ಅಮ್ಮ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ನಾನು ಸಾಕಷ್ಟು ಬಾರಿ ಬೇರೆ ಬೇರೆ ಸ್ಪರ್ಧೆಗಳಲ್ಲಿ ಸೋತು ಬಂದದ್ದುಂಟು. ಆಗಲೂ ನನ್ನ ಹೆತ್ತವರ ಪ್ರೀತಿಯು ಒಂದೇ ರೀತಿ ಇತ್ತು. ಇವತ್ತು ಗೆದ್ದು ಬಂದಾಗಲೂ ಅವರ ಮಾತುಗಳು ಒಂದೇ ರೀತಿ ಇರುತ್ತವೆ! ಇಂತಹ ಪೋಷಕರನ್ನು ಪಡೆದ ನಾನೇ ಧನ್ಯಳು “ಎಂದಾಕೆ ಮಾತು ಮುಗಿಸುತ್ತಾರೆ! ನತಾಶಾ ಹದಿಹರೆಯದ ಸಾಧಕರಿಗೆ ನಿಜಕ್ಕೂ ಸ್ಫೂರ್ತಿ ದೇವತೆಯಾಗಿ ನಿಲ್ಲುತ್ತಾರೆ.
-ರಾಜೇಂದ್ರ ಭಟ್ ಕೆ.