ಉಡುಪಿ, ಫೆ. 19: ಜಗದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಠ ಮಂದಿರ ಆಶ್ರಯದಲ್ಲಿ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ ಪೋಷಕರ ಮತ್ತು ಶಿಕ್ಷಕರ ಸಂಘ, ಸ್ವಾವಲಂಬಿ ಭಾರತ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಸಹಭಾಗಿತ್ವದಲ್ಲಿ ಮಿನಿ ಉದ್ಯೋಗ ಮೇಳ ಭಾನುವಾರ ಉಡುಪಿಯ ಶ್ರೀ ನಿತ್ಯಾನಂದ ಮಂದಿರ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಆಯೋಜಕರಾದ ವಿಜಯ್ ಕೊಡವೂರು ಅವರು ಉದ್ಯೋಗ ಸಿಗದೆ ಯುವಜನತೆ ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಲು, ಇನ್ನು ಮುಂದೆ ಪ್ರತಿ ತಿಂಗಳು ಉದ್ಯೋಗ ಮೇಳ ನಡೆಸುವುದಾಗಿ ಘೋಷಿಸಿದರು.
ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಅಧ್ಯಕ್ಷರಾದ ಅಂಡಾರು ದೇವಿಪ್ರಸಾದ್ ಶೆಟ್ಟಿ ಉದ್ಯೋಗ ಮೇಳವನ್ನು ಉದ್ಘಾಟಿಸಿ ಉದ್ಯೋಗ ಅರಸುವ ಜೊತೆ ಸ್ವಉದ್ಯೋಗ ನಡೆಸುವ ಬಗ್ಗೆ ಕೂಡ ಆಸಕ್ತರಾಗುವಂತೆ ಕರೆ ನೀಡಿದರು.
ಸಹ ಆಯೋಜಕರಾದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ಜನಾರ್ಧನ ಭಟ್ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಹಾರೈಸಿದರು. ಸಹ ಆಯೋಜಕರಾದ ರಾಷ್ಟ್ರೀಯ ಪದವಿಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘದ ಅಧ್ಯಕ್ಷರಾದ ಮಿಥೇಶ್ ಕುಮಾರ್ ಮೂಡುಕೊಣಾಜೆ ಕಾರ್ಯಕ್ರಮ ನಿರೂಪಿಸಿದರು.
ಒಟ್ಟು 108 ಉದ್ಯೋಗ ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. 8 ಅಭ್ಯರ್ಥಿಗಳು ಸ್ಥಳದಲ್ಲೇ ಉದ್ಯೋಗ ಖಾತ್ರಿಪಡಿಸಿಕೊಂಡರು. 82 ಅಭ್ಯರ್ಥಿಗಳು ಮುಂದಿನ ಸುತ್ತಿನ ಸಂದರ್ಶನಕ್ಕೆ ಆಯ್ಕೆಯಾದರು.