ನವದೆಹಲಿ, ಫೆ. 18: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನದ ಏಳು ಕಡೆಗಳಲ್ಲಿ ಇಂದು (ಶನಿವಾರ) ಎನ್.ಐ.ಎ ದಾಳಿ ನಡೆಸಿದೆ. ಕೋಟಾ, ಸವಾಯ್ ಮಾಧೋಪುರ್, ಭಿಲ್ವಾರ, ಬುಂಡಿ ಮತ್ತು ಜೈಪುರ ಜಿಲ್ಲೆಗಳಲ್ಲಿರುವ ಶಂಕಿತರ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ದಾಳಿ ನಡೆಸಿದ ಎನ್.ಐ.ಎ ಡಿಜಿಟಲ್ ಉಪಕರಣಗಳು, ಏರ್ ಗನ್, ಹರಿತ ಆಯುಧಗಳು, ಹಿಂಸೆಗೆ ಕುಮ್ಮಕ್ಕು ನೀಡುವ ದಾಖಲೆಗಳನ್ನು ವಶಪಡಿಸಿಕೊಂಡಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಾದಿಕ್ ಸರಫ್, ಮಹಮ್ಮದ್ ಆಸಿಫ್ ಮತ್ತು ನಿಷೇಧಿತ ಪಿಎಫ್.ಐ ಇತರೆ ಸದಸ್ಯರು ಸಮಾಜಘಾತಕ ಕೃತ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಎನ್.ಐ.ಎ ಇಂದು (ಶನಿವಾರ) ದಾಳಿ ನಡೆಸಿದೆ. ಕಳೆದ ವರ್ಷ ಸೆಪ್ಟೆಂಬರ್ 19 ರಂದು ಎನ್.ಐ.ಎ ಸುವೊ ಮೊಟೊ ಪ್ರಕರಣವನ್ನು ದಾಖಲಿಸಿದನ್ನು ಇಲ್ಲಿ ಸ್ಮರಿಸಬಹುದು.