ಉಡುಪಿ, ಫೆ. 15: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾ ಆರೋಗ್ಯ ಯೋಜನೆ ಕಾರ್ಡ್ಗಳ ಮೂಲಕ ದೇಶದಾದ್ಯಂತ ನೋಂದಾಯಿತ ಆಸ್ಪತ್ರ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ ಪಡೆಯಲು ಅನುಕೂಲಕರವಾಗಿದ್ದು, ಸಾರ್ವಜನಿಕರು ಈ ಯೋಜನೆಯ ಸೌಲಭ್ಯ ಪಡೆಯಲು ತಮ್ಮ ಹತ್ತಿರದ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೆಂಟರ್ಗಳ ಮೂಲಕ ನೋಂದಾವಣೆ ಮಾಡಬಹುದಾಗಿದೆ.
ಹೆಚ್ಚಿನ ಚಿಕಿತ್ಸೆಗೆ ಮೇಲ್ದರ್ಜೆಯ ಆಸ್ಪತ್ರೆಗಳಿಗೆ ಆನ್ಲೈನ್ ಮೂಲಕ ರೆಫೆರಲ್ ನೀಡಲು ABPMJAY ಕಾರ್ಡ್ಗಳು ಅವಶ್ಯವಿದ್ದು, ಆಧಾರ್ ಕಾರ್ಡ್ಗೆ ಜೋಡಣೆಯಾಗಿರುವ ಮೊಬೈಲ್ ನಂಬರ್, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಧಾರದ ಮೇಲೆ ABPMJAY ಕಾರ್ಡ್ಗಳನ್ನು ನೋಂದಾವಣೆ ಮಾಡಲಾಗುವುದು. ಈ ಕಾರ್ಡಿನಲ್ಲಿ ಆಭಾ (ಆಯುಷ್ಮಾ಼ನ್ ಭಾರತ್ ಹೆಲ್ತ್ ಅಕೌಂಟ್) 14 ಸಂಖ್ಯೆಯ ನಂಬರ್ ಇರುವುದರಿಂದ ರೋಗಿಯ ಆರೋಗ್ಯ ದತ್ತಾಂಶವನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಲಾಗಿದ್ದು, ಇದರಿಂದ ಚಿಕಿತ್ಸೆ ಸಂದರ್ಭದಲ್ಲಿ ರೋಗಿಯ ಹಿಂದಿನ ಚಿಕಿತ್ಸೆಯ ದತ್ತಾಂಶ ದೊರೆತು ಶೀಘ್ರವಾಗಿ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ.
ಅರ್ಹತೆ ಮತ್ತು ಚಿಕಿತ್ಸಾ ಮೊತ್ತ: ಬಿ.ಪಿ.ಎಲ್ ಪಡಿತರ ಕಾರ್ಡ್ ಹೊಂದಿರುವವರು ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಲ್ಲಿ (RSBY) ನೋಂದಾಯಿತರಾಗಿರುವ ಫಲಾನುಭವಿಗಳು ವಾರ್ಷಿಕ ಕುಟುಂಬಕ್ಕೆ ತಲಾ 5,00,000 ರೂ ವರೆಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಎ.ಪಿ.ಲ್ ಕಾರ್ಡ್ದಾರರು ಅಥವಾ ಬಿ.ಪಿ.ಎಲ್ ಕಾರ್ಡ್ ಹೊಂದಿಲ್ಲದವರು ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು, ವಾರ್ಷಿಕ ಪ್ರತಿ ಕುಟುಂಬಕ್ಕೆ 1,50,000 ರೂ ವರೆಗೆ ಪಡೆಯಬಹುದಾಗಿದೆ.
ಈ ಯೋಜನೆಯಲ್ಲಿ ರೋಗಗಳ ಚಿಕಿತ್ಸೆಯನ್ನು 4 ಹಂತದಲ್ಲಿ ವಿಭಜಿಸಲಾಗಿದ್ದು, ಚಿಕಿತ್ಸಾ ಕೋಡ್ಗಳಾದ ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು (2ಎ), ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು (2ಬಿ), ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು (3ಎ) ಮತ್ತು ತುರ್ತು ಚಿಕಿತ್ಸೆ 169 ಚಿಕಿತ್ಸಾ ವಿಧಾನಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು (4ಎ) ಆಗಿದ್ದು, ಒಟ್ಟು 1650 ಚಿಕಿತ್ಸಾ ಕೋಡುಗಳು ಮತ್ತು 8 ಕೋವಿಡ್ ಕೋಡುಗಳು ಲಭ್ಯವಿರುತ್ತದೆ.
ಯೋಜನೆಯ ಸೌಲಭ್ಯ ಪಡೆಯುವ ವಿಧಾನ: ಯಾವುದೇ ವ್ಯಕ್ತಿಗೆ ರೋಗ ಲಕ್ಷಣಗಳು ಕಂಡು ಬಂದಲ್ಲಿ ಪ್ರಥಮವಾಗಿ ಹತ್ತಿರದ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಖಾಯಿಲೆಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.
ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಆರೋಗ್ಯ ಮಿತ್ರರನ್ನು ಅಥವಾ ಆರೋಗ್ಯ ಸಹಾಯವಾಣಿ 104 ಮತ್ತು 14555 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಅಥವಾ ಜಿಲ್ಲೆಯ ಆರೋಗ್ಯ ಮಿತ್ರರಾದ ಉಡುಪಿ ಜಿಲ್ಲಾ ಆಸ್ಪತ್ರೆಯ ಪುಷ್ಪ ಜೆ ಶೆಟ್ಟಿ ಮೊ.ನಂ: 9480819591, ಉಡುಪಿಯ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸುಜನ್ ಮಾಲ ಎ ಮೊ.ನಂ:9480819596 ಹಾಗೂ ಹರೀಶ್ ಎಸ್ ಮೊ.ನಂ: 9480819597, ಕಾರ್ಕಳ ಸಾರ್ವಜನಿಕ ಆಸ್ಪತ್ರೆಯ ಚೇತನ್ ಪ್ರಭು ಮೊ.ನಂ: 9480819592, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ರಜನಿ ಮೊ.ನಂ: 8088036117, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಕಿರಣ್ ಕುಮಾರ್ ಮೊ.ನಂ: 7348806832, ಮಣಿಪಾಲ ಕೆ.ಎಂ.ಸಿ ಯ ಮೇಘಶ್ರೀ ಆಚಾರ್ಯ ಮೊ.ನಂ: 9480819595, ನಾಗರತ್ನ ಕುಕ್ಕುಜೆ ಮೊ.ನಂ: 9480819593, ಶೋಭಾ ಡಿ ಮೊ.ನಂ: 9480819594, ಚೆನ್ನಕೇಶವ ಮೊ.ನಂ: 7349725183 ಹಾಗೂ ವಿನೋದ್ ಮೊ.ನಂ: 8431194639 ಮತ್ತು ನಗರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನ ಜಿಲ್ಲಾ ಸಂಯೋಜಕಿ ಡಾ. ತೇಜಸ್ವಿನಿ ಎ ಮೊ.ನಂ: 9480819766 ಅನ್ನು ಸಂಪರ್ಕಿಸಬಹುದಾಗಿದೆ.
ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾ ಆರೋಗ್ಯ ಯೋಜನೆ ಕಾರ್ಡ್ಗಳನ್ನು ಪಡೆಯುವಲ್ಲಿ ಯಾವುದೇ ಸಂದೇಹಗಳಿದ್ದಲ್ಲಿ ಹತ್ತಿರದ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.