ಬೆಂಗಳೂರು, ಫೆ. 11: ಅಲ್ ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ ಮಹಮ್ಮದ್ ಆರೀಫ್ ಎಂಬವನನ್ನು ಶನಿವಾರ ಎನ್.ಐ.ಎ, ರಾಜ್ಯ ಪೊಲೀಸರ ಜತೆಗೆ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ಇದರ ಬೆನ್ನಲ್ಲೇ ದೇಶದ ವಿವಿಧೆಡೆ ಎನ್. ಐ.ಎ ದಾಳಿ ನಡೆಸಿದೆ. ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶದಲ್ಲಿ ಎನ್.ಐ.ಎ ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ವಾಸವಾಗಿದ್ದ ಉತ್ತರ ಪ್ರದೇಶದ ಮಹಮ್ಮದ್ ಆರೀಫ್ (40) ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ. ತಾಲಿಬಾನ್ ಹಾಗೂ ಆಲ್ ಖೈದಾ ಜೊತೆಗೆ ಈತನಿಗೆ ನಿಕಟ ಸಂಪರ್ಕವಿತ್ತು ಎಂದು ತಿಳಿದುಬಂದಿದೆ. ಶನಿವಾರ ಶಂಕಿತ ಉಗ್ರ ಆರೀಫ್ ನನ್ನು ಬಂಧಿಸಲಾಗಿದ್ದು, ಶಂಕಿತ ಉಗ್ರ ಆರೀಫ್ ಮಾಹಿತಿ ಮೇರೆಗೆ 3 ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶಗಳಲ್ಲಿ ಎನ್ ಐಎ ದಾಳಿ ನಡೆಸಿದ್ದಾರೆ.
ಸಿರಿಯಾಗೆ ಹಾರಲು ಯೋಜನೆ: ಉಗ್ರರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದ ಮಹಮ್ಮದ್ ಆರೀಫ್ ಮಾರ್ಚ್ ೧೦ ರಂದು ಇರಾನ್ ಮೂಲಕ ಸಿರಿಯಾಗೆ ಹೋಗಲು ಯೋಜನೆ ರೂಪಿಸಿದ್ದು ಟಿಕೆಟ್ ಕೂಡ ಖರೀದಿಸಿದ್ದ. ಈತ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಬೆಂಗಳೂರಿನ ತಣಿಸಂದ್ರ ಮುಖ್ಯ ರಸ್ತೆಯ ಮಂಜುನಾಥ ಲೇಔಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಶನಿವಾರ ಬೆಳಿಗ್ಗೆ ನಡೆದ ಎನ್.ಐ.ಎ, ಐ.ಎಸ್.ಡಿ ಮತ್ತು ರಾಜ್ಯ ಪೊಲೀಸರ ಜಂಟಿ ಕಾರ್ಯಾಚರಣೆ ಸುಮಾರು ಪೂರ್ವಾಹ್ನ ೧೧.೪೫ ಗಂಟೆಗೆ ಮುಕ್ತಾಯವಾಯಿತು. ಈತನ ಬಳಿಯಿದ್ದ ಪಾಸ್ ಪೋರ್ಟ್, ಲ್ಯಾಪ್ ಟಾಪ್, ಏರ್ ಟಿಕೆಟ್, ಉಗ್ರರ ಜೊತೆಗೆ ಸಂಪರ್ಕಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.