ವಿದ್ಯಾಗಿರಿ (ಮೂಡುಬಿದಿರೆ), ಫೆ. 9: ಉನ್ನತ ವಿಚಾರಗಳನ್ನು ಸ್ವೀಕರಿಸುವ ಹಾಗೂ ಆಸ್ವಾದಿಸುವ ಧನಾತ್ಮಕ ಶಕ್ತಿಯನ್ನು ಹೊಂದಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಭಾವನತ್ಮಕ ಸ್ವಾತಂತ್ರ್ಯದ ತಂತ್ರಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಈ ಜಗತ್ತು ಇರುವುದು ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವವರಿಗೆ. ಯಾವುದೇ ಕೆಲಸವನ್ನು ತೀವ್ರ ಸ್ಪಂದನೆ ಹಾಗೂ ತುಡಿತದಿಂದ ಮಾಡಿದಾಗ ಮಾತ್ರ ನ್ಯಾಯ ನೀಡಲು ಸಾಧ್ಯ. ಬೇಕಾಬಿಟ್ಟಿ ಕಾರ್ಯಗಳು ಅವಸಾನಕ್ಕೆ ಕಾರಣವಾಗುತ್ತವೆ ಎಂದರು. ಎಲ್ಲರೂ ತೃಪ್ತಿ ಹಾಗೂ ಗೌರವನ್ನು ಬಯಸುತ್ತಾರೆ. ಗೌರವದ ನಿರೀಕ್ಷೆಯು ಶಾಲಾ ದಿನಗಳಿಂದಲೇ ಆರಂಭವಾಗುತ್ತದೆ. ರ‍್ಯಾಂಕ್, ಬಹುಮಾನ ಇತ್ಯಾದಿಗಳು ಪಡೆಯುವ ಮೂಲಕ ಬಾಲ್ಯದಲ್ಲೇ ಗೌರವದ ನಿರೀಕ್ಷೆಗಳನ್ನು ಬೆಳೆಸಲಾಗುತ್ತಿದೆ ಎಂದರು.
ಸಂತ ಆಗ್ನೆಸ್ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿ. ಪ್ರೇಮಾನಂದ ಮಾತನಾಡಿ, ಪ್ರತಿ ವ್ಯಕ್ತಿಯ ದೇಹದಲ್ಲಿ ಶಕ್ತಿ ಸಂಚಲನದ ಬಿಂದುಗಳಿರುತ್ತವೆ. ಈ ಪೈಕಿ ಕರಗಳ ಕರಾಟೆ ಹೊಡೆತದ ಬಿಂದು, ಕಣ್ಣ ರೆಪ್ಪೆ, ಕಣ್ಣ ರೆಪ್ಪೆಯ ಬದಿ, ಕಣ್ಣಿನ ಕೆಳಭಾಗ, ಮೂಗಿನ ಕೆಳಭಾಗ, ಗಲ್ಲ, ಪಕ್ಕೆಲುಬು, ಕಂಕುಳ, ಶಿರೋಬಿಂದು ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಬದುಕಿನಲ್ಲಿ ಭಾವನೆ ಬೇಕು. ಆದರೆ, ಭಾವನಾತ್ಮಕತೆ ನಿಯಂತ್ರಣದಲ್ಲಿ ಇರಬೇಕು ಎಂದರು.
ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಆಡ್ರೇ ಪಿಂಟೊ ಇದ್ದರು. ಅನುಶ್ರೀ ಅತಿಥಿಗಳನ್ನು ಪರಿಚಯಿಸಿದರು. ಅನಘಪ್ರಭ ಸ್ವಾಗತಿಸಿ, ಅನಶ್ವರ ವಂದಿಸಿದರು. ವಿದ್ಯಾರ್ಥಿನಿ ಫಾತಿಮಾ ರೋಸ್ಲಿ ನಿರೂಪಿಸಿದರು.