ಉಡುಪಿ, ಫೆ. 7: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ವಿವಿಧ ವರ್ಗದ ಕುಶಲಕರ್ಮಿಗಳಿಗೆ ತಲಾ 50,000 ರೂ. ವರೆಗೆ ಸಾಲ-ಸಹಾಯಧನ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್ ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ) ಗಳಿಂದ ಮಂಜೂರಾದ ಸಾಲದ ಮೇಲೆ ಇಲಾಖೆ ವತಿಯಿಂದ ಶೇ. 30 ರಷ್ಟು ಗರಿಷ್ಠ 15,000 ರೂ. ವರೆಗೆ ಸಹಾಯಧನ ನೀಡಲಾಗುವುದು.
ಜಿಲ್ಲೆಯ 18 ವರ್ಷ ಮೇಲ್ಪಟ್ಟ ಕಮ್ಮಾರಿಕೆ, ಬುಟ್ಟಿ ಹೆಣೆಯುವವರು, ಗೋಲ್ಡ್ ಸ್ಮಿತ್ (ಆಭರಣ ತಯಾರಿಕೆ), ಕಲ್ಲಿನ ಕೆತ್ತನೆ, ಮರದ ಕೆತ್ತನೆಗಳು, ಕುಂಬಾರಿಕೆ, ಟೆರಾಕೋಟ್, ಮಣ್ಣಿನ ವಿಗ್ರಹ ತಯಾರಿಕೆ, ಲೋಹದ ಕರಕುಶಲ, ಬೆತ್ತ ಬಿದಿರು, ಕಸೂತಿ ಕಲೆ (ಎಂಬ್ರಾಯಿಡರಿ), ಕೋಕೋನಟ್ ಶೆಲ್ ಕ್ರಾಪ್ಟ್, ದೋಬಿ, ಚಮ್ಮಾರಿಕೆ ಹಾಗೂ ಕ್ಷೌರಿಕ ಕುಶಲಕರ್ಮಿಗಳು ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನ.
ಪಂಚಾಯತ್ ವ್ಯಾಪ್ತಿಯ ಕುಶಲರ್ಮಿಗಳು ಸಂಬಂಧಿಸಿದ ಗ್ರಾಮ ಪಂಚಾಯಿತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ ಹಾಗೂ ನಗರ ಪ್ರದೇಶದ ಕುಶಲಕರ್ಮಿಗಳು ಕೈಗಾರಿಕಾ ವಿಸ್ತರಣಾಧಿಕಾರಿ, ಉಡುಪಿ ರವರಿಂದ ಕುಶಲಕರ್ಮಿ ವೃತ್ತಿಯನ್ನು ನಡೆಸುತ್ತಿರುವ ಬಗ್ಗೆ ಅರ್ಜಿಯೊಂದಿಗಿನ ನಿಗದಿತ ನಮೂನೆಯಲ್ಲಿ ದೃಢೀಕರಣ ಪಡೆದು ಕೊನೆಯ ದಿನಾಂಕದ ಮುಂಚಿತವಾಗಿ ಕಚೇರಿಗೆ ಸಲ್ಲಿಸಬೇಕು.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಚೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ ಅಥವಾ ಕೈಗಾರಿಕಾ ವಿಸ್ತರಣಾಧಿಕಾರಿ, ಉಡುಪಿ ಮೊ.ನಂ: 8310828195 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.