ಉಡುಪಿ, ಫೆ. 6: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಮೂಲ ಸಂಸ್ಕೃತಿ – ಕನ್ನಡ ಸಂಸ್ಕೃತಿ ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರದ ಉದ್ಘಾಟನೆಯು ಅಲೆವೂರು ಶಿವರಾಮ ಕಾರಂತ ಸಮುಚ್ಚಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಜಿ ಶಂಕರ್ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ನಿಕೇತನ ಮಾತನಾಡಿ, ನಾಶದ ಅಂಚಿನಲ್ಲಿರುವ ಮೂಲ ಸಂಸ್ಕೃತಿಗೆ ಅನುಗುಣವಾದ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ಶ್ಲಾಘನೀಯ. ಶಾಸ್ತ್ರೀಯ ಚೌಕಟ್ಟನ್ನು ಬದಿಗಿಟ್ಟು ಕಲೆಯನ್ನು ಆಸ್ವಾದಿಸುವ ಉದ್ದೇಶವನ್ನು ಇಟ್ಟುಕೊಂಡು ಅದನ್ನು ಪ್ರೋತ್ಸಾಹಿಸಿದಾಗ ತಳಸಮುದಾಯದ ವಿಶಿಷ್ಟ ಕಲೆಗಳು ಉಳಿಯುವುದರ ಮೂಲಕ ಮೂಲ ಸಂಸ್ಕೃತಿ ಉಳಿದು, ನಾಡಿನ ಸಂಸ್ಕೃತಿ ಸಮೃದ್ಧವಾಗಲಿದೆ ಎಂದರು.
ಶಿಬಿರದ ಜಿಲ್ಲಾ ಸಂಚಾಲಕಿ ಅನಿತಾ ಸಾಲ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು. ಗಣೇಶ್ ಕುಂಭಾಶಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಚೇರಿ ಸಹಾಯಕ ಶಶಿಧರ್ ನಿರೂಪಿಸಿ ವಂದಿಸಿದರು.