ಮಣಿಪಾಲ, ಫೆ. 3: ರಕ್ತದ ಗುಂಪು ಓ ನೆಗೆಟಿವ್ ಆಗಿದ್ದು ಹಾಗೂ ಆಂಟಿಬಾಡಿ ಇದೆಯೆಂದು ಮುಂದಿನ ನಿರ್ವಹಣೆಗಾಗಿ ಗರ್ಭಿಣಿ ಮಹಿಳೆಯನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಕಳುಹಿಸಲಾಗಿತ್ತು. ಕಸ್ತೂರ್ಬಾ ಆಸ್ಪತ್ರೆ ರಕ್ತ ಕೇಂದ್ರದಲ್ಲಿ ಪರೀಕ್ಷೆ ಮಾಡಿದಾಗ ಮಹಿಳೆಗೆ ಅತ್ಯಂತ ಅಪರೂಪದ ಬಾಂಬೆ ನೆಗೆಟಿವ್ ರಕ್ತದ ಗುಂಪು ಇರುವುದು ಕಂಡುಬಂದಿತು. ಇಂತಹ ಸಂದರ್ಭದಲ್ಲಿ ಆಂಟಿ ‘ಡಿ’ ಆಂಟಿಬಾಡಿ ಇರುವಿಕೆಯನ್ನು ಪರೀಕ್ಷೆ ಮಾಡಲು ತುಂಬಾ ಕಷ್ಟ. ರಕ್ತದ ಉನ್ನತ ಮಟ್ಟದ ಇಮ್ಮುನೊ ಹೆಮಟಾಲೋಜಿ ಪರೀಕ್ಷೆಯ ಮೂಲಕ ಆಂಟಿ ‘ಡಿ’ ಆಂಟಿಬಾಡಿ ಇಲ್ಲವೆಂದು ಸಾಬೀತುಪಡಿಸಲಾಯಿತು.
ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ ಮುಖ್ಯಸ್ಥೆ ಡಾ.ಶಮೀ ಶಾಸ್ತ್ರಿ ಮಾತನಾಡಿ, ಇಡೀ ದೇಶದಲ್ಲಿ ಈ ಅಪರೂಪದ ರಕ್ತದ ಗುಂಪಿನ ಕೆಲವೇ ದಾನಿಗಳಿರುವುದರಿಂದ ರಕ್ತ ವರ್ಗಾವಣೆ ತಜ್ಞರು ಮತ್ತು ಪ್ರಸೂತಿ ತಜ್ಞರಿಗೆ ಇದರ ನಿರ್ವಹಣೆ ಒಂದು ಸವಾಲಾಗಿತ್ತು. ಆಕೆಯ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಸ್ವಯಂ ರಕ್ತ ಸಂಗ್ರಹಣೆ ಮಾಡಲಾಯಿತು’ ಎಂದರು. ಎರಿಥ್ರೋಪೊಯೆಟಿನ್ ಚುಚ್ಚುಮದ್ದು ಮತ್ತು ಐರನ್ ಚುಚ್ಚುಮದ್ದುಗಳನ್ನು ಪ್ರಸವಪೂರ್ವ ಹಿಮೋಗ್ಲೋಬಿನ್ ಅನ್ನು ಸುಧಾರಿಸಲು ಬಳಸಲಾಯಿತು.
ಭ್ರೂಣಕ್ಕೆ ರಕ್ತ ಪೂರೈಕೆ ಕಡಿಮೆ ಇದ್ದುದರಿಂದ ಮತ್ತು ಭ್ರೂಣದ ಬೆಳವಣಿಗೆಯ ನಿರ್ಬಂಧ ಕಾರಣದಿಂದ ತಾಯಿಯ ಆರೈಕೆಯು ಮತ್ತಷ್ಟು ಜಟಿಲವಾಗಿತ್ತು. ತಾಯಿಯ ಪ್ರತಿಕಾಯಗಳ ಕಾರಣದಿಂದಾಗಿ ಭ್ರೂಣವು ರಕ್ತಹೀನತೆಯ ಅಪಾಯದಲ್ಲಿತ್ತು, ಇದಕ್ಕಾಗಿ ಹೆಚ್ಚುವರಿ ತೀವ್ರ ಮೇಲ್ವಿಚಾರಣೆಯನ್ನು ಮಾಡಲಾಯಿತು.
ಫೀಟಲ್ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಅಖಿಲಾ ವಾಸುದೇವ ಅವರು ಭ್ರೂಣದ ಮೇಲೆ ನಿರಂತರ ನಿಗಾವಹಿಸಿ ಪ್ರಸವಪೂರ್ವ ಆರೈಕೆ ನಿರ್ವಹಿಸಿ ರಕ್ತರಹಿತ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದರು. ಉತ್ತಮ ರೋಗಿಯ ನಿರ್ವಹಣೆಗಾಗಿ ಗರ್ಭಾವಸ್ಥೆಯಲ್ಲಿ ಪ್ರಸವಪೂರ್ವ ಪ್ರತಿಕಾಯ ಸ್ಕ್ರೀನಿಂಗ್ ಮತ್ತು ರಕ್ತದ ಗುಂಪಿನ ಪರೀಕ್ಷೆ ಮಾಡುವುದರ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.
ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿ ಡಾ. ಆನಂದ ವೇಣುಗೋಪಾಲ್ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಅಪರೂಪದ ರಕ್ತದ ಗುಂಪನ್ನು ಸಮಯೋಚಿತವಾಗಿ ಪತ್ತೆ ಹಚ್ಚಿ ಯಶಸ್ವಿಯಾಗಿ ನಿರ್ವಹಿಸಿದುದಕ್ಕೆ ವೈದ್ಯರ ತಂಡವನ್ನು ಶ್ಲಾಘಿಸಿದರು.