ಉಡುಪಿ, ಫೆ. 2: ಜಗದ್ಗುರು ಮಧ್ವಾಚಾರ್ಯರು ಭಗವಂತನ ಮಹಿಮೆಯನ್ನು ವರ್ಣಿಸುವ ವೇದಗಳ ಜ್ಞಾನವನ್ನು ಯಥಾವತ್ತಾಗಿ ಜಗತ್ತಿಗೆ ಧಾರೆಯೆರೆದವರು. ಹಾಗೆಯೇ ಮಾಘಶುದ್ಧ ನವಮೀ ದಿನದಂದು ತಮ್ಮ ಶಿಷ್ಯರಿಗೆ ಐತರೇಯೋಪನಿಷತ್ತನ್ನು ಪಾಠ ಮಾಡುತ್ತಲೇ ಸಶರೀರ ಅದೃಶ್ಯರಾಗಿ ತಮ್ಮ ಅವತಾರ ಸಮಾಪ್ತಿ ಮಾಡಿದವರು. ಈ ಕಾರಣಗಳಿಗಾಗಿ ಮಧ್ವನವಮಿಯು ವೇದೋಪನಿಷತ್ತಿನ ಅನುಸಂಧಾನದ ಪರ್ವದಿನವಾಗಿದೆ ಎಂದು ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಉಡುಪಿಯ ಅಂಬಲಪಾಡಿ ಈಶಾವಾಸ್ಯಂನಲ್ಲಿ (ಬನ್ನಂಜೆ ಗೋವಿಂದಾಚಾರ್ಯರ ಮನೆ) ಮಧ್ವನವಮೀ ಪ್ರಯುಕ್ತ ಶ್ರೀ ಮಠದ ಪಟ್ಟದ ದೇವರ ಪೂಜೆ, ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಸಿದ ಬಳಿಕ ನಡೆದ ಸಭೆಯಲ್ಲಿ ಡಾ. ಬನ್ನಂಜೆ ಗೋವಿಂದಾಚಾರ್ಯರು ಋಗ್ವೇದದ 12 ಋಕ್ಕುಗಳಿಗೆ ಬರೆದ ಭಾಷ್ಯಕೃತಿ ವೇದಗಳ ಸಂದೇಶವನ್ನು ಲೋಕಾರ್ಪಣೆಗೊಳಿಸಿ ಅನುಗ್ರಹ ಸಂದೇಶ ನೀಡಿದರು.
ಕೃತಿಯ ಬಗ್ಗೆ ಸಂಪಾದಕ ವಿ. ವಿಜಯಸಿಂಹ ತೋಟಂತಿಲ್ಲಾಯರು ಹಾಗೂ ವೈದಿಕ ವಾಙ್ಮಯಕ್ಕೆ ಬನ್ನಂಜೆಯವರ ಕೊಡುಗೆ ಎಂಬ ವಿಷಯದ ಮೇಲೆ ವಿ. ಶ್ರೀಹರಿ ವಾಳ್ವೇಕರ್ ವಿಷಯ ಮಂಡಿಸಿದರು. ಡಾ. ರಾಮನಾಥ ಆಚಾರ್ಯ ಶುಭಾಶಂಸನೆಗೈದರು. ಸರ್ವಜ್ಞ ಆಚಾರ್ಯ, ವಿನಯಭೂಷಣ ಆಚಾರ್ಯ ಉಪಸ್ಥಿತರಿದ್ದರು. ವೇಣುಗೋಪಾಲ ಸಾಮಗರ ನೇತೃತ್ವದ ವೈದಿಕರಿಂದ ಸುದರ್ಶನಹೋಮ ಸಹಿತ ಧಾರ್ಮಿಕ ವಿಧಿಗಳು ನೆರವೇರಿತು. ಕೃತಿ ಪ್ರಕಟಣೆಗೆ ಸಹಕರಿಸಿದ ಮುರಳೀಕೃಷ್ಣ ತಂತ್ರಿಯವರನ್ನು ಗೌರವಿಸಲಾಯಿತು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.