Thursday, September 19, 2024
Thursday, September 19, 2024

ಮೂಡುಬೆಳ್ಳೆ- ಒಂದು ಪಕ್ಷಿನೋಟ

ಮೂಡುಬೆಳ್ಳೆ- ಒಂದು ಪಕ್ಷಿನೋಟ

Date:

ಸಾಮಾಜಿಕ, ಸಾಂಸ್ಕೃತಿಕ‌ ಹಾಗೂ‌ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿರುವ ಬೆಳ್ಳೆ/ಮೂಡುಬೆಳ್ಳೆ ಪ್ರದೇಶವು ಸುಮಾರು 5000 ವರ್ಷಗಳಷ್ಟು ಹಿಂದಿನ ಪ್ರಾಚೀನತೆಯನ್ನು ಹೊಂದಿದೆ. ಜಿಲ್ಲಾ ಕೇಂದ್ರವಾದ ಉಡುಪಿಯಿಂದ ಸುಮಾರು 16 ಕಿ.ಮೀ‌ ದೂರದಲ್ಲಿರುವ ಬೆಳ್ಳೆಯು ಐತಿಹ್ಯದ ಪ್ರಕಾರ ಮೂಲತಃ ಬೊಳ್ಳೆ‌ (ಬೊಳ್ಳದ ಊರು) ಎಂಬುದಾಗಿತ್ತು. ಪಂಚಾಯತ್ ರಾಜ್ಯ ವ್ಯವಸ್ಥೆಯು ಜಾರಿಗೆ ಬಂದ ನಂತರ ಬೆಳ್ಳೆ‌ ಗ್ರಾಮವು ಮೂಡುಬೆಳ್ಳೆ ಹಾಗೂ ಪಡುಬೆಳ್ಳೆಯಾಗಿ ಇಬ್ಭಾಗವಾಯಿತು.

ಬೆಳ್ಳೆ ಪರಿಸರ‌ದ‌ ಪ್ರಾಚೀನತೆಯನ್ನು‌ ಪ್ರಾಗಿತಿಹಾಸ ಕಾಲದಿಂದ ಇತಿಹಾಸ ಕಾಲಘಟ್ಟದವರೆಗೆ ಗುರುತಿಸಬಹುದು. ಕುಂಜಾರುಗಿರಿಯ ಬಾಣತೀರ್ಥ ಪರಿಸರ ಹಾಗೂ‌ ಮಾಣಿಬೆಟ್ಟು ಪರಿಸರದಲ್ಲಿ ಪತ್ತೆಯಾದ‌ ನೂತನ‌ ಶಿಲಾಯುಗ ಕಲ್ಲಿನ ಕೊಡಲಿಗಳು ಹಾಗೆಯೇ ಪಡುಬೆಳ್ಳೆ ಪರಿಸರದಲ್ಲಿ ಪತ್ತೆ ಮಾಡಲಾದ‌ ಬೃಹತ್ ಶಿಲಾಯುಗದ‌ ಸಮಾಧಿಗಳು ಈ ಸ್ಥಳವು ಪ್ರಾಗಿತಿಹಾಸ ಕಾಲದಿಂದಲೂ ಮಾನವ ನೆಲೆಗೆ ಯೋಗ್ಯವಾಗಿತ್ತು ಎಂದು‌ ಹೇಳುವುದಕ್ಕೆ ಸಾಕ್ಷಿಯಾಗಿದೆ.

ಇತಿಹಾಸ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಪೆರ್ಣಂಕಿಲದಲ್ಲಿ ಈಶ್ವರ ಮತ್ತು ಗಣಪತಿಯನ್ನು ಆರಾಧಿಸುವ ದೇವಾಲಯವಿದ್ದು, ಇಲ್ಲಿ 13ನೇ‌ ಶತಮಾನದ ಆಳುಪ ದೊರೆ ವೀರ ಪಾಂಡ್ಯದೇವನ ಮಡದಿಯಾದ ಬಲ್ಲಮಹಾದೇವಿಯ ಶಾಸನವಿದೆ. ಶ್ರೀ‌ ಮಧ್ವಾಚಾರ್ಯರ ಜನ್ಮಸ್ಥಳವಾದ ಪಾಜಕ‌ವು ಬೆಳ್ಳೆಯ ಒಂದು ಭಾಗವಾಗಿದೆ.

ಕುಂಜಾರುಗಿರಿ (ಕುಂಜರ – ಗಜ) ಪ್ರದೇಶದಲ್ಲಿ ದುರ್ಗಾದೇವಿ ಹಾಗೂ ಪಡುಬೆಳ್ಳೆಯಲ್ಲಿ ಮಹಾಲಿಂಗೇಶ್ವರ ದೇವಾಲಯಗಳಿದ್ದು, ಮಹಾಲಿಂಗೇಶ್ವರ ದೇವಾಲಯದ ಒಳಗಿರುವ ವೈಶಿಷ್ಟ್ಯಪೂರ್ಣವಾದ ವರ್ತುಲಾಕಾರದ ಸೂರ್ಯಗುಡಿಯು ಸಾ.ಶ 15-16ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಇದೇ ಪರಿಸರದಲ್ಲಿ ಪ್ರಾಚೀನ ಜೈನ ಸಮಾಧಿ ಹಾಗೂ ಗುತ್ತಿನ‌ ಮನೆಯನ್ನು ಕಾಣಬಹುದು.

ಬೆಳ್ಳೆಯ ಕಟ್ಟಿಂಗೇರಿ ಪ್ರದೇಶದಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯವು ಚತುರ್ಮುಖ ಬ್ರಹ್ಮನ ಆರಾಧನೆ‌ ಇರುವ ಕರ್ನಾಟಕದ ಕೆಲವೇ ಕ್ಷೇತ್ರಗಳಲ್ಲಿ ಒಂದು. ಹಾಗೆಯೇ ಮಾಣಿಬೆಟ್ಟು ಪ್ರದೇಶದಲ್ಲಿ ಮಹಾಲಿಂಗೇಶ್ವರ ದೇವಾಲಯವಿದ್ದು, ಈ ಪರಿಸರದಲ್ಲಿ ಪ್ರಾಚೀನ ದೇವಾಲಯದ ಭಗ್ನವಶೇಷ, ಶಾಸನ ಮತ್ತು ಪುಷ್ಕರಣಿಯನ್ನು ನೋಡಬಹುದು. ಇಲ್ಲೇ ಹತ್ತಿರದಲ್ಲಿರುವ ಪಾರ್ಲ ಪಾಡಿಯಲ್ಲಿ ಕಂಡುಬರುವ ಪುರಾತನ ಬಾವಿಗಳು, ಪ್ರಾಚೀನ‌ ಕೋಟೆಯ ಅವಶೇಷಗಳು ಹಾಗೂ ಜೈನ ಸಮಾಧಿಗಳು ಈ ಪರಿಸರದ‌ ಇತಿಹಾಸಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಆಧುನಿಕ ಕಲಾ ಶೈಲಿಯಲ್ಲಿ ನಿರ್ಮಾಣವಾದ ಸಂತ ಲಾರೆನ್ಸ್ ಇಗರ್ಜಿಯು ಬೆಳ್ಳೆಯ ಕ್ರೈಸ್ತ ಧರ್ಮಿಯರ ಕೇಂದ್ರವಾಗಿದೆ. ಇಲ್ಲಿ ಪ್ರತಿ ವರ್ಷವೂ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಊರಿನ ಹಾಗೂ ಪರವೂರಿನ ಎಲ್ಲಾ ಧರ್ಮದವರು ಪಾಲ್ಗೊಳ್ಳುತ್ತಾರೆ. ಬೆಳ್ಳೆ ಪಂಚಾಯತಿ ವ್ಯಾಪ್ತಿಯು ಸಕಲ ಮೂಲಭೂತ ಸೌಲಭ್ಯಗಳಾದ ಸಾರಿಗೆ, ಶಿಕ್ಷಣ ಸಂಸ್ಥೆಗಳು, ನ್ಯಾಯಬೆಲೆ‌ ಅಂಗಡಿ, ಆರೋಗ್ಯ ಕೇಂದ್ರಗಳು, ಅಂಚೆ ಕಚೇರಿ, ಗ್ರಂಥಾಲಯ, ರುದ್ರ ಭೂಮಿಯನ್ನು ಹೊಂದಿದೆ.

ಊರಿನ ಸಾಧಕರು ಬೆಳ್ಳೆಯ ಕೀರ್ತಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಸಾರಿದ್ದಾರೆ. ಅವರಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೆಳ್ಳೆ ಕನ್ನಡ‌ ಮಾಧ್ಯಮದ‌ ಮುಖ್ಯೋಪಾಧ್ಯಾಯರಾಗಿದ್ದ ದಿ. ಪೀಟರ್ ರಾಫೆಲ್ ಅರಾನ್ಹಾರವರು ರಾಷ್ಟ್ರಪ್ರಶಸ್ತಿ ಪುರಸ್ಕೃತರು. ಜಾನಪದ ಕ್ಷೇತ್ರ ಹಾಗೂ ಆಕಾಶವಾಣಿ ಮಂಗಳೂರಿನಲ್ಲಿ ಕಾರ್ಯನಿರ್ವಹಿಸಿದ್ದ ಮುದ್ದು‌ ಮೂಡುಬೆಳ್ಳೆಯವರು ಬೆಳ್ಳೆ ಊರಿನ ಇತಿಹಾಸವನ್ನು ಪರಿಚಯಿಸಿದವರಲ್ಲಿ ಮೊದಲಿಗರು. ಚಿತ್ರಕಲಾ ಕ್ಷೇತ್ರದಲ್ಲಿ ಕೆ.ಕೆ.ಹೆಬ್ಬಾರ್ ಮತ್ತು ಉಪಾಧ್ಯಾಯ ಮೂಡುಬೆಳ್ಳೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಿ.ಎಂ.ಹೆಗ್ಗಡೆಯವರ ಕೊಡುಗೆ ಅವಿಸ್ಮರಣೀಯ.

ಇಂದಿಗೂ ತುಳುನಾಡಿನ ಸಂಪ್ರದಾಯಗಳಾದ ದೈವಾರಾಧನೆ, ನಾಗಾರಾಧನೆ, ಕೋಲ, ತಂಬಿಲ ಇಂತಹ ಆಚರಣೆಗಳನ್ನು ಸಂಪ್ರದಾಯ ಬದ್ದವಾಗಿ, ನಿಷ್ಠೆಯಿಂದ ಆಚರಿಸಿಕೊಂಡು ಬಂದಿರುವ ಬೆಳ್ಳೆಯಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮದ‌ ಜನರು ಕೋಮು ಸೌಹಾರ್ದ ಜೀವನ‌ ನಡೆಸುತ್ತಿದ್ದಾರೆ ಹಾಗೂ ಎಲ್ಲಾ ಧರ್ಮಿಯರ ಆಚರಣೆಯಲ್ಲಿ ಇಂದಿಗೂ ಒಟ್ಟಾಗಿ ಭಾಗವಹಿಸುತ್ತಿದ್ದಾರೆ.

-ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ
(ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ)

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!