ವಿದ್ಯಾಗಿರಿ: ಚೆನ್ನೈನ ಕ್ರೆಸೆಂಟ್ ವಿಶ್ವವಿದ್ಯಾನಿಲಯದಲ್ಲಿ ಸೋಮವಾರ ಮುಕ್ತಾಯಗೊಂಡ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಅನ್ನು ಮಂಗಳೂರು ವಿಶ್ವವಿದ್ಯಾನಿಲಯ ಮುಡಿಗೇರಿಸಿಕೊಂಡಿದ್ದು, ತಂಡದ 10 ಆಟಗಾರರಲ್ಲಿ 9 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.
ಟೂರ್ನಿಯಲ್ಲಿ ಕಣಕ್ಕಿಳಿದ ಆರೂ (ಹೆಚ್ವುವರಿ ಸೇರಿ) ಆಟಗಾರರು ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳು. ಇವರೆಲ್ಲರೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಕ್ರೀಡಾ ದತ್ತು ಯೋಜನೆ’ಯ ಅಡಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಭಾರತೀಯ ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ನೀಡುವ ಪ್ರತಿಷ್ಠಿತ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ಪುರಸ್ಕೃತೆ ಜಯಲಕ್ಷ್ಮಿ ಜಿ. ಅವರು, 8 ಬಾರಿ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದಿರುವ ಮಂಗಳೂರು ವಿಶ್ವವಿದ್ಯಾನಿಲಯ ತಂಡದ ಭಾಗವಾಗಿದ್ದರು. ಅವರು ಕರ್ನಾಟಕ ತಂಡದ ನಾಯಕಿಯಾಗಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯವು ಒಟ್ಟು 12 ಬಾರಿ ಪ್ರಶಸ್ತಿ ಪಡೆದಿದ್ದು, ಸತತವಾಗಿ 8 ಬಾರಿ ಪ್ರಶಸ್ತಿಗೆ ಮುತ್ತಿಕ್ಕಿತು. ವಿಜೇತ ತಂಡವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಸೆಮಿ ಫೈನಲ್ಸ್ ಲೀಗ್ ಹಂತದ ಪಂದ್ಯಗಳಲ್ಲಿ ಮಂಗಳೂರು ವಿ.ವಿ. ಅಣ್ಣಾ ವಿ.ವಿ ತಂಡವನ್ನು 35- 24, 35-24 ಅಂಕಗಳಿಂದ, ಮದ್ರಾಸ್ ವಿವಿಯನ್ನು 35-27, 35-32 ಅಂಕಗಳಿಂದ ಹಾಗೂ ಚೆನ್ನೈನ ಎಸ್. ಆರ್.ಎಂ. ವಿ.ವಿ ತಂಡವನ್ನು 35-22, 35-25 ಅಂಕಗಳಿಂದ ಸೋಲಿಸಿ ದಾಖಲೆ ಬರೆಯಿತು.
ರಾಷ್ಟ್ರದ 84 ವಿ.ವಿ.ಗಳು ಭಾಗವಹಿಸಿದ್ದ ಈ ಟೂರ್ನಿಯ ಕ್ವಾರ್ಟರ್ ಫೈನಲ್ ಗೆ ನೇರ ಪ್ರವೇಶ ಪಡೆದಿದ್ದ ಮಂಗಳೂರು ವಿವಿಯು ಸೇಲಂನ ಪೆರಿಯಾರ್ ವಿ.ವಿ ತಂಡವನ್ನು ನೇರ ಸೆಟ್ ಗಳಿಂದ ಸೋಲಿಸಿ ದಾಖಲೆಯ ಸತತ 18ನೇ ಬಾರಿಗೆ ಲೀಗ್ ಪ್ರವೇಶವನ್ನು ಪಡೆಯಿತು.