ಕಾರ್ಕಳ, ಜ. 28: ಗೊಮ್ಮಟ ಬೆಟ್ಟ, ಚತುರ್ಮುಖ ಬಸದಿ, ಪಡುತಿರುಪತಿ, ಮಾರಿಗುಡಿ, ಅನಂತಶಯನ, ಹಿರಯಂಗಡಿ, ಆನೆಕೆರೆ, ವರಂಗಾ, ಅತ್ತೂರು, ಕೋಟಿಚೆನ್ನಯ್ಯ ಥೀಮ್ ಪಾರ್ಕ್ ಇರುವ ಕಾರ್ಕಳದ ಹಿರಿಮೆಗೆ ಮತ್ತೊಂದು ಸೇರ್ಪಡೆಯಾಗುತ್ತಿರುವ ತುಳುನಾಡಿನ ಸೃಷ್ಟಿಕರ್ತನೆಂದು ನಂಬಿರುವ ಶ್ರೀ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನೊಳಗೊಂಡ ಥೀಮ್ ಪಾರ್ಕ್ ಬೈಲೂರು–ಎರ್ಲಪಾಡಿಯ ಉಮಿಕಲ್ ಬೆಟ್ಟದಲ್ಲಿ ಸ್ಥಾಪನೆಗೊಳ್ಳುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಅಂದು ಮಣಿಪಾಲದಲ್ಲಿ ಎಂಡ್ ಪಾಯಿಂಟ್ ಎಂದು ಕರೆಸಿಕೊಳ್ಳುತ್ತಿದ್ದ ಪರಿಸರ ಡಾ.ವಿ.ಎಸ್.ಆಚಾರ್ಯರಿಂದ ಇಂದು ಸುಂದರ ‘ರಜತಾದ್ರಿ’ ಆದಂತೆ, ಬೈಲೂರು–ಎರ್ಲಪಾಡಿಯ ಉಮಿಕಲ್ ಬೆಟ್ಟವಿಂದು ಭಗವಂತನ ಪ್ರೇರಣೆಯೆಂಬಂತೆ ಸಚಿವ ವಿ. ಸುನೀಲ್ ಕುಮಾರ್ ಅವರಿಂದ ಪರಶುರಾಮ ಥೀಮ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಈ ಉಮಿಕಲ್ ಬೆಟ್ಟವಿನ್ನು ‘ಪ್ರೇರಣಾ ಶಿಖರ’ವಾಗಿ ನಾಡಿನ ಯಾತ್ರಾರ್ಥಿಗಳಿಗೆ ಚಿರಪರಿಚಿತವಾಗಲಿ ಎಂದು ಶುಭ ಹಾರೈಸಿದರು.
ಗಣಿತನಗರದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಯ ಪ್ರಯುಕ್ತ ನಡೆದ ಸಂಸ್ಥೆಯ ಉದ್ಯೋಗಿಗಳ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿ, 3 ದಿನಗಳು ತಮ್ಮನ್ನು ಎಲ್ಲಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಜೊತೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‌ನ ವತಿಯಿಂದ 242 ಉದ್ಯೋಗಿಗಳಿಗೆ ಥೀಮ್ ಪಾರ್ಕ್ ಲೋಕಾರ್ಪಣೆಯ ಪ್ರಯುಕ್ತ ಭಕ್ಷೀಸು ವಿತರಿಸಲಾಯಿತು.