ಕಾರ್ಕಳ, ಜ.27: ಕಾರ್ಕಳದ ಬೈಲೂರು ಯರ್ಲಪಾಡಿಯಲ್ಲಿ ನಿರ್ಮಾಣವಾಗಿರುವ ತುಳುನಾಡ ಸೃಷ್ಟಿಕರ್ತ ಪರಶುರಾಮನ ಕಂಚಿನ ಪ್ರತಿಮೆಯನ್ನು ಒಳಗೊಂಡ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್ ಅನ್ನು ಸಹಸ್ರ ಶಂಖನಾದ ಮೊಳಗುವಿಕೆಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಅವರು, ಪುರಾಣದಲ್ಲಿ ಪರಶುರಾಮನಿಗೆ ಎತ್ತರದ ಸ್ಥಾನವಿದೆ. ಪರಶುರಾಮನದ್ದು ಮೇರು ವ್ಯಕ್ತಿತ್ವ. ತನ್ನ ತಪಸ್ಸಿನ ಫಲವಾಗಿ ಕರಾವಳಿ ಪ್ರದೇಶವನ್ನು ಸೃಷ್ಟಿಸಿದ ಪರಶುರಾಮನನ್ನು ಸದಾ ಸ್ಮರಿಸುವುದು ತುಳುನಾಡಿನ ಜನರ ಆದ್ಯ ಕರ್ತವ್ಯ. ಮುಂದಿನ ಪೀಳಿಗೆಗೆ ಪರಶುರಾಮನ ಇತಿಹಾಸವನ್ನು ಪರಿಚಯಿಸುವ ವೇದಿಕೆಯನ್ನು ಸಚಿವ ಸುನಿಲ್ ಕುಮಾರ್ ಪರಶುರಾಮ ಥೀಮ್ ಪಾರ್ಕ್ ಮೂಲಕ ಮಾಡಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ.
ನಾನಿಲ್ಲಿ ಮುಖ್ಯಮಂತ್ರಿಯಾಗಿ ಬಂದಿಲ್ಲ. ಪರಶುರಾಮನ ಭಕ್ತನಾಗಿ ಬಂದಿದ್ದೇನೆ. ಈ ಪ್ರದೇಶವು ಪ್ರವಾಸೋದ್ಯಮ ಕೇಂದ್ರವಾಗುವುದರ ಜೊತೆಗೆ ಪುಣ್ಯಭೂಮಿಯಾಗಿ ಪರಿವರ್ತನೆಯಾಗಲಿದೆ. ಕರಾವಳಿ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳಿವೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ, ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ, ಉಡುಪಿ ಶಾಸಕ ಕೆ. ರಘುಪತಿ ಭಟ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚೀಂದ್ರ, ದಿ ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.