ಕುಂದಾಪುರ, ಜ.26: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಂ. ಎಂ. ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್. ಆಚಾರ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಫಿನಿಶಿಂಗ್ ಟಚ್: ಪೋಷಕ- ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆಯವರು ಮಾತನಾಡಿ, ಪ್ರೌಢಶಾಲಾ ಹಂತದ ಕೊನೆ ಘಟ್ಟ ಎಸ್.ಎಸ್.ಎಲ್. ಸಿ. ಆದರೆ, ಇದು ಭವಿಷ್ಯದ ಹಾದಿಯಲ್ಲಿ ವಿದ್ಯಾರ್ಥಿಗಳು ಹೊಸ ಹೆಜ್ಜೆ ಇಡುವ ಹೊಸ ಪರ್ವದ ಕಾಲ.
ಈ ಕಾಲದಲ್ಲಿ ವಿದ್ಯಾರ್ಥಿಗಳು ಸಮಯ ಪರಿಪಾಲನೆಯೊಂದಿಗೆ ಸತತ ಪರಿಶ್ರಮದಿಂದ ಅಧ್ಯಯನ ನಡೆಸುವಂತೆ ಪ್ರೋತ್ಸಾಹಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾದದ್ದು. ಮಕ್ಕಳಿಗೆ ಬೆನ್ನೆಲುಬಾಗಿ ಪೋಷಕರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಿದ್ದೇ ಆದಲ್ಲಿ ಯಶಸ್ಸು ಶತಸಿದ್ದ ಎಂದರು.
ಶಾಲಾ ಪ್ರಾಂಶುಪಾಲೆ ಚಿಂತನಾ ರಾಜೇಶ್ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಪ್ರಾಂಶುಪಾಲೆ ಮತ್ತು ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ. ಎನ್., ಸಹಾಯಕ ಮುಖ್ಯ ಶಿಕ್ಷಕ ಚಂದ್ರಶೇಖರ್ ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಜಗದೀಶ್ ಆಚಾರ್ ಸಾಸ್ತಾನ ಉಪಸ್ಥಿತರಿದ್ದರು. ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.