ಮಂಗಳೂರು, ಜ.25: ಸದೃಢ ರಾಷ್ಟ್ರದ ನಿರ್ಮಾಣದಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವುದೇ ಆಮಿಷಗಳಿಗೆ ಒಳಗಾಗದೆ ಚುನಾವಣೆಗಳಲ್ಲಿ ಮತ ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು
ಬಲಪಡಿಸಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ ಹೇಳಿದರು.
ಪ್ರಾದೇಶಿಕ ಜಂಟಿ ನಿರ್ದೇಶಕರ ಕಛೇರಿ ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಹಾಗೂ ವಕೀಲರ ಸಂಘ ಮಂಗಳೂರು ಇವರ ಸಹಯೋಗದಲ್ಲಿ ಡಾ. ಪಿ. ದಯಾನಂದ ಪೈ-ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು ರಥಬೀದಿ ಇಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸ್ನಾತಕೋತ್ತರ ವಿಭಾಗಗಳ ಮುಖ್ಯ ಶೈಕ್ಷಣಿಕ ಸಂಯೋಜಕರಾದ ಡಾ. ನಾಗಪ್ಪ ಗೌಡ ಕೆ ಸಂವಿಧಾನದ ಮಹತ್ವ ಹಾಗೂ ಚುನಾವಣೆಗಳ ಮಹತ್ವವನ್ನು ವಿವರಿಸಿ
ವಿದ್ಯಾಥಿಗಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅರಿವನ್ನು ಮೂಡಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅವರು, ವಿದ್ಯಾರ್ಥಿಗಳಿಗೆ ಮತದಾನದ ಮಹತ್ವವನ್ನು ತಿಳಿಸಿ, ಆತ್ಮಸಾಕ್ಷಿಗನುಸಾರವಾದ ನಿರ್ಧಾರದೊಂದಿಗೆ ಪ್ರತಿಯೊಬ್ಬ
ವಿದ್ಯಾರ್ಥಿಯೂ ಕಡ್ಡಾಯವಾಗಿ ಮತ ಚಲಾಯಿಸುವಂತೆ ಕರೆ ನೀಡಿದರು.
ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿಗಳಾದ ದೇವಿಪ್ರಸಾದ್ ಇವರು ರಾಷ್ಟ್ರೀಯ ಮತದಾರರ ದಿನಾಚರಣೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ನವೀನ್ ಪ್ರಾರ್ಥಿಸಿದರು.
ಚುನಾವಣಾ ಸಾಕ್ಷರತಾ ಕ್ಲಬ್‌ನ ಸಂಯೋಜಕರಾದ ನಸೀಮಾ ಬೇಗಂ ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿ ವಂದನಾರ್ಪಣೆಗೈದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜ್ಯೋತಿಪ್ರಿಯ ಕಾರ್ಯಕ್ರಮ ನಿರೂಪಿಸಿದರು.