ಉಡುಪಿ: ಕವಿ ಮುದ್ದಣ ಮಾರ್ಗ ಇಲ್ಲಿಯ ನವೀಕೃತ ಭಗವಾನ್ ಶ್ರೀ ನಿತ್ಯಾನಂದ ಮಂದಿರ-ಮಠದ ಲೋಕಾರ್ಪಣಾ ಕಾರ್ಯಕ್ರಮವು ಜ. 15, 16 ರಂದು ನಡೆಯಿತು. ನವೀಕೃತ ಮಂದಿರ-ಮಠದ ಲೋಕಾರ್ಪಣೆಯ ಸಂದರ್ಭದಲ್ಲಿ ನಡೆದ ಭವ್ಯ ಶೋಭಾಯಾತ್ರೆ, ಧಾರ್ಮಿಕ ಹಾಗೂ ಅನ್ನಸಂತರ್ಪಣೆ ಮೊದಲಾದ ಸಮಿತಿಗಳಲ್ಲಿ ಸ್ವಯಂಸೇವಕರಾಗಿ ಶ್ರಮಿಸಿದವರಿಗೆ ಅಭಿನಂದಿಸುವ, ಅಭಿನಂದನಾ ಕಾರ್ಯಕ್ರಮವು ಭಗವಾನ್ ಶ್ರೀನಿತ್ಯಾನಂದ ಮಂದಿರ-ಮಠದ ಆಡಳಿತ ಮಂಡಳಿಯ ಆಯೋಜನೆಯಲ್ಲಿ ಮಂದಿರ-ಮಠದ ಸಭಾಂಗಣದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ, ಮಂದಿರ-ಮಠದ ಅಧ್ಯಕ್ಷರಾದ ತೋಟದಮನೆ ಕೆ. ದಿವಾಕರ ಶೆಟ್ಟಿಯವರು, ಸ್ವಯಂಸೇವಕರನ್ನು ಅಭಿನಂದಿಸಿ, ಮಂದಿರದಲ್ಲಿ ಪ್ರತಿ ಗುರುವಾರ ಬಾಲಭೋಜನ, ಅನ್ನದಾನ ನಡೆಯುತ್ತಿದೆ. ಮುಂದೆ ನಿತ್ಯವು ಅನ್ನದಾನ, ಹಾಗೂ ವಿದ್ಯಾ ಸಂಸ್ಥೆ ಸ್ಥಾಪಿಸುವ ಯೋಜನೆಯು ಆಡಳಿತ ಮಂಡಳಿಯ ಮುಂದಿದೆ ಎಂದು ಹೇಳಿದರು.
ಮಂದಿರ-ಮಠದ ಸಂಚಾಲಕ ರಾಮಚಂದ್ರ ಮಿಜಾರು ಅಭಿನಂದನಾ ಭಾಷಣ ಮಾಡಿದರು. ಇದೇ ಸಂದರ್ಭ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದ ಉದ್ಯಮಿ ಪುರುಷೋತ್ತಮ ಪಿ. ಶೆಟ್ಟಿ ಹಾಗೂ ಬೃಹತ್ ಶೋಭಾಯಾತ್ರೆಯ ಉಸ್ತುವಾರಿ ವಹಿಸಿದ್ದ ನಟರಾಜ್ ಎಸ್ ಹೆಗ್ಡೆ ಪಳ್ಳಿ ಅವರನ್ನು ಸನ್ಮಾನಿಸಲಾಯಿತು. ಶ್ರಮದಾನಗೈದಿರುವ ಸ್ವಯಂಸೇವಕರಿಗೆ ಅಭಿನಂದಾನ ಪತ್ರ, ಹಾಗೂ ನಿತ್ಯಾನಂದ ಸ್ವಾಮೀಜಿಯವರ ಚರಿತೆ, ‘ಕರುಣಾಳು ಬೆಳಕು’ ಗ್ರಂಥ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂದಿರ ಮಠದ ಪ್ರಧಾನ ಸಂಚಾಲಕರಾದ ಶಶಿಕುಮಾರ್ ಶೆಟ್ಟಿ ಗೋವಾ, ಬನ್ನಂಜೆ ಉದಯ ಕುಮಾರ್ ಶೆಟ್ಟಿ, ಕಾಂಞಂಗಾಡ್ ಶ್ರೀವಿದ್ಯಾಕೇಂದ್ರದ ಟ್ರಸ್ಟಿ ಕೆ. ಮೋಹನ್ ಚಂದ್ರನ್ ನಂಬಿಯಾರ್, ಪ್ರಚಾರ ಸಮಿತಿಯ ಉಸ್ತುವಾರಿ ರಘುವೀರ್ ಪೈ, ರಘುನಾಥ್ ನಾಯಕ್, ಸುಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಮಂದಿರ-ಮಠದ ಗೌರವಾಧ್ಯಕ್ಷರಾದ ನಟರಾಜ್ ಎಸ್ ಹೆಗ್ಡೆ ಪಳ್ಳಿ ಪ್ರಸ್ತಾವನೆಗೈದರು. ನಗರಸಭೆ ಸದಸ್ಯ ವಿಜಯ ಕೊಡವೂರು ಸ್ವಾಗತಿಸಿದರು. ಪ್ರಧಾನ ಸಂಚಾಲಕ ಈಶ್ವರ್ ಶೆಟ್ಟಿ ಚಿತ್ಪಾಡಿ ನಿರೂಪಿಸಿದರು. ಭಾರತಿ ಶೆಟ್ಟಿ ಪ್ರಾರ್ಥನೆ ಸಲ್ಲಿಸಿದರು.