ಉಡುಪಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು ಕೊಡೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿದರು.
ಶಾಲೆಯಲ್ಲಿರುವ ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಶಾಲಾ ಕಟ್ಟಡದ ಮೇಲ್ಛಾವಣಿ ತಗಡಿನ ಶೀಟ್ ಆಗಿದ್ದರಿಂದ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಯವರು, ಕರಾವಳಿಯ ವಾತಾವರಣಕ್ಕೆ ಇಂತಹ ಮೇಲ್ಛಾವಣೆ ಅಳವಡಿಸಿರುವುದು ಸಮಂಜಸವಲ್ಲ. ಬಿಸಿಲಿನ ತಾಪ ಹಾಗೂ ಮಳೆಯ ಸದ್ದಿಗೆ ಮಕ್ಕಳಿಗೆ ಕಲಿಕೆಗೆ ತೊಡಕಾಗುವ ಸಾಧ್ಯತೆಯಿದೆ. ಹೀಗಾಗಿ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಲೆಯ ಮೇಲ್ಛಾವಣಿ ಸರಿಪಡಿಸುವ ಸಂಬಂಧ ಜಿಲ್ಲಾಧಿಕಾರಿಯವರಿಗೆ ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲಾ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯಿಂದ ಮನವಿ ಸಲ್ಲಿಸಲಾಯಿತು. ಈ ವೇಳೆ ಸ್ಥಳದಲ್ಲಿದ್ದ ಜಿ.ಪಂ. ಸಿಇಒ ಪ್ರಸನ್ನ ಅವರೊಂದಿಗೂ ಈ ವಿಷಯವಾಗಿ ಜಿಲ್ಲಾಧಿಕಾರಿಗಳು ಚರ್ಚಿಸಿದರು.
ಬಿಆರ್‌ಸಿ ಸಂಯೋಜಕ ಕರುಣಾಕರ ಶೆಟ್ಟಿ, ಆಹಾರ ಇಲಾಖೆಯ ಉಪನಿರ್ದೇಶಕ ಮೊಹಮ್ಮದ್ ಇಸಾಕ್, ಕಿರಿಮಂಜೇಶ್ವರ ಗ್ರಾ.ಪಂ. ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಶೇಖರ್ ಖಾರ್ವಿ, ಸದಸ್ಯ ಆನಂದ ಪೂಜಾರಿ, ಪ್ರಮುಖರಾದ ಅನುರ್ ಮೆಂಡನ್, ವಿಜಯ ಪೂಜಾರಿ, ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳ ಸಂಘದ ಸದಸ್ಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.