ಉಡುಪಿ: ಮಹನೀಯರು, ದಾರ್ಶನಿಕರ ತತ್ವ ಆದರ್ಶಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿರದೆ, ಇಡೀ ಮನುಕುಲಕ್ಕೆ ಅನ್ವಯವಾಗಲಿದ್ದು, ಇವುಗಳನ್ನು ಎಲ್ಲಾ ವರ್ಗದ ಜನರು ಪಾಲಿಸಬಹುದಾಗಿದ್ದು, ಅದರಲ್ಲೂ ವಿದ್ಯಾರ್ಥಿಗಳು ವಚನಕಾರರ ಸಂದೇಶವನ್ನು ತಮ್ಮ ಬದುಕಿನಲ್ಲಿ ಮೈಗೊಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್ ಹೇಳಿದರು.
ಅವರು ಶನಿವಾರ ಉಡುಪಿಯ ಒಳಕಾಡು ಸರಕಾರಿ ಪ್ರೌಢಶಾಲೆಯಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ವತಿಯಿಂದ ನಡೆದ ಶ್ರೀ ಶಿವಯೋಗಿ ಸಿದ್ಧರಾಮ, ಮಹಾಯೋಗಿ ವೇಮನ ಹಾಗೂ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಡಾ. ಶ್ರೀಕಾಂತ್ ಸಿದ್ಧಾಪುರ ಮಾತನಾಡುತ್ತಾ, ಅಂಬಿಗರ ಚೌಡಯ್ಯ, ಸಿದ್ಧರಾಮೇಶ್ವರ, ಬಸವಣ್ಣರವರು ಸಮಕಾಲೀನರಾಗಿದ್ದವರು. ಶೋಷಿತ ಜನಾಂಗದಲ್ಲಿ ಜನಿಸಿದ ಅಂಬಿಗರ ಚೌಡಯ್ಯ ಮೇಲ್ವರ್ಗ ಶೋಷಣೆ ವಿರುದ್ಧ ಧ್ವನಿಯೆತ್ತಿದ್ದರು. ಜ್ಞಾನ ಸಂಪಾದನೆಯಿಂದ ಶೋಷಿತ ತಡೆ ಸಾಧ್ಯ ಎಂದರಿತ ಚೌಡಯ್ಯ, ಮೌಡ್ಯ ವಿರುದ್ಧ ಅತ್ಯಂತ ತೀಕ್ಷ್ಮ ವಚನಗಳ ಮೂಲಕ ಸಮಾಜದಲ್ಲಿ ಅರಿವು ಮೂಡಿಸುತ್ತಿದ್ದರು ಎಂದು ಹೇಳಿದರು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗಭೂಷಣ ಶೇಟ್, ಅಂಬಿಗರ ಚೌಡಯ್ಯ ಸಮುದಾಯದ ವಿಜಯ ಗಂಗಾಪುತ್ರ ಉಪಸ್ಥಿತರಿದ್ದರು.
ರಾಜೇಶ್ ಶ್ಯಾನುಬೋಗ್ ಮತ್ತು ತಂಡದವರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಮುಖ್ಯೋಪಾಧ್ಯಾಯರಾದ ನಿರ್ಮಲಾ ವಂದಿಸಿದರು, ಶಿಕ್ಷಕಿ ತಾರಾಮತಿ ನಿರೂಪಿಸಿದರು.