ಬ್ರಹ್ಮಾವರ: ಚೈತನ್ಯ ಯುವಕ ಮಂಡಲ (ರಿ.) ನೀಲಾವರ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ನಡೆಸಲಾದ ಪ್ರತಿಭಾ ಪುರಸ್ಕಾರದ ಭಾಗವಾಗಿ ನೀಲಾವರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸ್ತವ್ಯವಿದ್ದು ಕನ್ನಡ ಮಾಧ್ಯಮದಲ್ಲಿ ಗ್ರಾಮಕ್ಕೆ ಅತೀ ಹೆಚ್ಚು ಅಂಕಗಳನ್ನು ಗಳಿಸಿದ ಧನುಶ್ರೀ ಇವರಿಗೆ ಚೈತನ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಂದ್ರ ಕುಮಾರ್, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವಜನತೆ ಮೈಗೂಡಿಸಿಕೊಳ್ಳಬೇಕು ಎಂದರು. ನ್ಯಾಯವಾದಿ ಬೈಕಾಡಿ ಸುಪ್ರಸಾದ ಶೆಟ್ಟಿ ಮಾತನಾಡಿ, ಯುವಜನತೆ ಇತ್ತೀಚಿನ ದಿನಗಳಲ್ಲಿ ಮಾದಕ ವ್ಯಸನಿಗಳಾಗುತ್ತಿರುವ ಕುರಿತಾಗಿ ಆತಂಕ ವ್ಯಕ್ತಪಡಿಸಿದರು. ನೀಲಾವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಘುರಾಮ ಮದ್ಯಸ್ಥ ಮಾತನಾಡಿ, ಯುವಜನತೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ರಾಷ್ಟ್ರನಿರ್ಮಾಣದ ಕಾರ್ಯ ಶೀಘ್ರ ನೆರವೇರಲಿದೆಯೆಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಅನುಪ್ ಶೆಟ್ಟಿ, ಯುವಕ ಮಂಡಲದ ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿಗಾರ್, ಅಧ್ಯಕ್ಷ ಶ್ಯಾಮರಾಯ ಆಚಾರ್ಯ, ಕಾರ್ಯದರ್ಶಿ ಹರೀಶ್ ಆಚಾರ್ಯ, ಸಾಂಸ್ಕೃತಿಕ ಸಂಘಟಕ ಪುರುಷೋತ್ತಮ ಉಪಸ್ಥಿತರಿದ್ದರು.
ಪ್ರಶಾಂತ್ ನೀಲಾವರ ಯುವಕ ಮಂಡಲದ ವಾರ್ಷಿಕ ವರದಿ ವಾಚಿಸಿದರು. ಮಧುಸೂದನ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ಮನರಂಜನೆಯಾಗಿ ಕಾಂತಾರ ಚಲನಚಿತ್ರವನ್ನು ಎಲ್.ಇ.ಡಿ. ಪರದೆಯ ಮೇಲೆ ಪ್ರದರ್ಶಿಸಲಾಯಿತು. 400 ಕ್ಕೂ ಹೆಚ್ಚು ಗ್ರಾಮಸ್ಥರು ಚಲನಚಿತ್ರ ವೀಕ್ಷಿಸಿದರು.