ಬೆಂಗಳೂರು: ನಮ್ಮ ರಾಜ್ಯದ ಮಹಿಳಾ ಮತದಾರರು ಬಹಳಷ್ಟು ಬುದ್ದಿವಂತರಿದ್ದಾರೆ. ನಾ ನಾಯಕಿಯಂತಹ ಕಾಂಗ್ರೆಸ್ ಕಾರ್ಯಕ್ರಮಗಳ ಪೊಳ್ಳು ಭರವಸೆಗಳಿಗೆ ಮಹಿಳಾ ಮತದಾರರು ಮರುಳಾಗುವಷ್ಟು ದಡ್ಡರಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಹಿಳಾ ಮತದಾರರು ಕಾಂಗ್ರೆಸ್ ಗೆ ನೆನೆಪಾಗಿದ್ದಾರೆ. ಕೇವಲ ಮತಕ್ಕಾಗಿ, ಅಧಿಕಾರದ ದಾಹಕ್ಕಾಗಿ ಹೊಸ ಘೋಷಣೆಗಳೊಂದಿಗೆ ಕಾಂಗ್ರೆಸ್ ಜನರ ಮುಂದೆ ಹೋಗುತ್ತಿದೆ ಎಂದು ಹಿಂದೂ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ, ಹಜ್ ಮತ್ತು ವಕ್ಪ್ ಸಚಿವರಾದ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಕಾಂಗ್ರೆಸ್ ಕಾಲಕಾಲಕ್ಕೆ ಹೊಸ ಹೊಸ ಘೋಷಣೆಗಳ ಮೂಲಕ ಜನರನ್ನು ಮರಳು ಮಾಡುತ್ತಲೇ ಬಂದಿದೆ. ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ‘ಮೈ ಲಡ್ಕಿ ಹೂಂ ಮೈ ಲಡ್ ಸಕ್ತಿ ಹೂಂ’ ಎಂದು ಘೋಷಣೆ ಹಾಕಿದ ಕಾಂಗ್ರೆಸ್, ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಠೇವಣಿ ಕಳಕೊಂಡಿದ್ದು ಜನರಿಗೆ ಸರಿಯಾಗಿ ನೆನಪಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಬಲ್ ಇಂಜಿನ್ ಸರಕಾರ ಮಹಿಳೆಯರ ಸರ್ವತೋಮುಖ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮಹಿಳಾ ಸಬಲೀಕರಣಕ್ಕಾಗಿ ಆಯವ್ಯಯದಲ್ಲಿ ವಿಶೇಷ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ಸಾಮರ್ಥ್ಯ ಯೋಜನೆಯನ್ನು ಕೂಡ ಅನುಷ್ಠಾನಗೊಳಿಸಲಾಗಿದೆ. ಬಿಜೆಪಿ ಸರ್ಕಾರದ ಯೋಜನೆಗಳೇ ನಮಗೆ ಚುನಾವಣೆಯಲ್ಲಿ ಶ್ರೀರಕ್ಷೆ ಎಂದು ಶಶಿಕಲಾ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.