ಕುಂದಾಪುರ: ಕರಾವಳಿ ಕಾವಲು ಪೊಲೀಸ್ ಠಾಣೆ, ಗಂಗೊಳ್ಳಿ ಇದರ ವತಿಯಿಂದ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ, ಗ್ರಾಮ ಪಂಚಾಯತ್ ತ್ರಾಸಿ, ಎಸ್.ಎಲ್.ಆರ್.ಎಂ. ಘಟಕ ತ್ರಾಸಿ, ಸಾಯಿ ಖುಷಿ ಮರವಂತೆ, ಮರವಂತೆಯ ವಿವಿಧ ಮೀನುಗಾರಿಕಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ‘ಹೊಸ ವರ್ಷಕ್ಕೆ ನಮ್ಮ ನಡೆ ಪ್ಲಾಸ್ಟಿಕ್ ಮುಕ್ತ ಬೀಚ್ ಕಡೆ ಅಭಿಯಾನ’ ಕಾರ್ಯಕ್ರಮ ತ್ರಾಸಿ-ಮರವಂತೆ ಕಡಲ ತೀರದಲ್ಲಿ ನಡೆಯಿತು.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನಂಜಪ್ಪ ಎನ್ ಮಾತನಾಡಿ, ಮುಂದಿನ ಪೀಳಿಗೆಗಾಗಿ ಸ್ವಚ್ಛ, ಸುರಕ್ಷಿತ, ಸುಂದರ ಬೀಚ್ ನಿರ್ಮಿಸುವುದು ನಮ್ಮೆಲ್ಲರ ಉದ್ದೇಶ. 2023 ಹೊಸ ವರ್ಷಾಚರಣೆಯನ್ನು ಪ್ಲಾಸ್ಟಿಕ್ ಮುಕ್ತ ಕಡಲ ಕಿನಾರೆಯನ್ನಾಗಿ ಮಾಡಬೇಕೆನ್ನುವ ಕರಾವಳಿ ಕಾವಲು ಪೊಲೀಸ್ ಇಲಾಖೆ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿ ಅಬ್ದುಲ್ ಅಹದ್ ಆಶಯದಂತೆ ಕಡಲ ತೀರದ ಸ್ವಚ್ಛತ ಕಾರ್ಯ ಕೈಗೊಳ್ಳಲಾಗಿದೆ ಎಂದರು.
ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಉಪನಿರೀಕ್ಷಕ ವಿಜಯ ಅಮೀನ್, ಎಎಸ್‌ಐ ಭಾಸ್ಕರ ಬಿ., ಠಾಣೆಯ ಸಿಬ್ಬಂದಿ, ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು, ಸಾಯಿ ಖುಷಿ ಸಂಸ್ಥೆಯ ಸದಸ್ಯರು, ಮರವಂತೆಯ ಮೀನುಗಾರಿಕಾ ಸಂಘಟನೆಗಳ ಪ್ರಮುಖರು, ಎಸ್‌ಎಲ್ ಆರ್‌ಎಂ ಘಟಕದ ಸಿಬ್ಬಂದಿ, ವಿವಿಧ ಮೀನುಗಾರಿಕಾ ಸಂಘಟನೆಗಳ ಸದಸ್ಯರು ಹಾಗೂ ಗ್ರಾಮಸ್ಥರು ತ್ರಾಸಿ-ಮರವಂತೆ ಕಡಲ ತೀರದಲ್ಲಿದ್ದ ತ್ಯಾಜ್ಯಗಳನ್ನು ಸಂಗ್ರಹಿಸಿ ಕಡಲ ತೀರವನ್ನು ಸ್ವಚ್ಛಗೊಳಿಸಿದರು.