ಉಡುಪಿ: ಇಡೀ ಜಗತ್ತು ಧಾರ್ಮಿಕ ಪರಂಪರೆಯ ನ್ಯಾಯಾಂಗ ವ್ಯವಸ್ಥೆ ಪಂಜರದಲ್ಲಿ ನಲುಗಿದಾಗ ಭಾರತೀಯ ನ್ಯಾಯಶಾಸ್ತ್ರ ಅನಾದಿ ಕಾಲದಿಂದಲೂ ಅನೇಕ ಮಹರ್ಷಿಗಳ ಫಲವಾಗಿ ಮತೀಯ ಪಂಜರಕ್ಕೆ ಸಿಲುಕದೆ ಸ್ವತಂತ್ರವಾಗಿ ಕಾರ್ಯಾಚರಿಸಿದೆ. ನಿರಂತರ ಸಮಾನತೆ, ಮಾನವೀಯತೆಯನ್ನು ಕಾಪಾಡಿಕೊಳ್ಳಲು ಭಾರತದ ನ್ಯಾಾಯಶಾಸ್ತ್ರ ಜಗತ್ತಿಗೆ ಮಾದರಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಹೇಳಿದರು.
ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ರವಿವಾರ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ‘ವಿಶ್ವಪ್ರಭಾ ಪುರಸ್ಕಾರ ವನ್ನು ‘ತರಂಗ’ ವಾರಪತ್ರಿಕೆ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಎಸ್. ಪೈ ಅವರಿಗೆ ಪ್ರದಾನ ಮಾಡುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಯೊಂದು ನಾಗರಿಕತೆಯ ಮೂಲ ಭಾಷೆ, ಸಾಹಿತ್ಯ, ಸಂಸ್ಕೃತಿ. ಇದು ಆಳವಾಗಿ ಬೆಳೆದಾಗ ಜಗತ್ತಿನಲ್ಲಿ ಪ್ರಶಾಂತತೆ ನೆಲೆಸುತ್ತದೆ. ಜಗತ್ತಿನಲ್ಲಿ ಎಲ್ಲ ನಾಗರಿಕತೆಯೂ ಭಾಷೆ, ಸಾಹಿತ್ಯ, ಸಂಸ್ಕೃತಿಯಿಂದ ನೆಮ್ಮದಿ, ಶಾಂತಿಯನ್ನು ಕಂಡುಕೊಂಡಿವೆ. ವಿಶ್ವ ಬ್ಯಾಂಕ್ ವರದಿ ಪ್ರಕಾರ ಭಾರತದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಬಡವರಿದ್ದಾರೆ. ಇದರ ಜತೆಗೆ ಭಾರತ ಮತ್ತು ಚೀನದಲ್ಲಿ ಖಾಸಗಿ ಸಂಪತ್ತು ಬೆಳೆಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯುದ್ಧವಿಲ್ಲದಿದ್ದರೂ ಶೋಷಣೆ, ಮಾನವೀಯ ಹಕ್ಕು ನಿರಾಕರಣೆಯಿಂದ ಅಶಾಂತಿ ನಿರ್ಮಾಣವಾಗುತ್ತದೆ. ಆಂತರಿಕ ಶಾಂತಿ ಜತೆಗೆ ಜಾಗತಿಕ ಶಾಂತಿ ಕಾಪಾಡಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸುವ ಅಗತ್ಯವಿದೆ ಎಂದರು. 1970ರಿಂದ ‘ಉದಯವಾಣಿ’ ಪತ್ರಿಕೆ ಕರಾವಳಿಯ ಅಭಿವೃದ್ಧಿಗೆ ಸಲ್ಲಿಸಿದ ಸೇವೆ ಅಮೂಲ್ಯವಾಗಿದೆ.
ತರಂಗ ವಾರಪತ್ರಿಕೆಯಲ್ಲಿ ಜಾಗತಿಕ ವಿಚಾರಗಳ ಬಗ್ಗೆ ವೈಶಿಷ್ಟಪೂರ್ಣ ಲೇಖನ ಬರಹಗಳು ಚಿಂತನೆಗೆ ಹಚ್ಚುತ್ತವೆ. ಈ ಕಾರಣದಿಂದಲೇ ಸಹಸ್ರಾರು ಓದುಗರನ್ನು ತರಂಗ ತನ್ನತ್ತ ಸೆಳೆದುಕೊಂಡಿದೆ. ಇದರ ಸಂಪೂರ್ಣ ಶ್ರೇಯಸ್ಸು ಡಾ. ಸಂಧ್ಯಾ ಪೈ ಅವರಿಗೆ ಸಲ್ಲಬೇಕು. ತಮ್ಮ ಬರವಣಿಗೆ ಮೂಲಕ ಸಾಮಾಜಿಕ, ಸಾಂಸ್ಕೃತಿಕವಾಗಿ ಹೊಸ ಬಗೆಯ ಆಯಾಮಗಳನ್ನು ತೆರೆದಿಟ್ಟಿದ್ದಾರೆ. ಸತತ ಅಧ್ಯಯನ, ವ್ಯಾಪಕ ಓದು ಎಲ್ಲ ಕ್ಷೇತ್ರಗಳ ಉತ್ತಮ ವಿಚಾರಗಳನ್ನು ಸಮನ್ವಯಗೊಳಿಸಿ ಪ್ರಸ್ತುತಪಡಿಸುವ ಅವರ ಬರಹಗಳು ಜ್ಞಾನ ಕೋಶವಾಗಿದೆ ಎಂದು ಬಣ್ಣಿಸಿದರು.
ವಿಶ್ವಪ್ರಭಾ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಡಾ. ಸಂಧ್ಯಾ ಎಸ್. ಪೈ ಅವರು, ಜೀವನವನ್ನು ಸುಖ ಮತ್ತು ದುಃಖ ಈ ಎರಡು ರೀತಿಯಲ್ಲಿ ಅವಲೋಕಿಸಿ ಮುನ್ನಡೆಯಬೇಕು. ಸತತ ಚಿಂತನೆ, ಧ್ಯಾನದಿಂದ ಯೋಗ್ಯ ಬದುಕು ರೂಪಿಸಿಕೊಳ್ಳಲು ಸಾಧ್ಯವಿದೆ. ನಾವು ಮಾಡುವ ಕೆಲವು ಕೆಲಸಗಳು ಇನ್ನೊಬ್ಬರ ಬಾಳು ಬೆಳಗಿಸಿದೆ ಎಂದಾಗ ಅದರಲ್ಲಿ ಸಿಗುವ ಸಾರ್ಥಕತೆ ಯಾವ ಸಂಪತ್ತಿನಲ್ಲಿಯೂ ಇಲ್ಲ ಎಂದರು.
ಓದಿನ ಹವ್ಯಾಸ ಮಾತ್ರ ಹೊಂದಿದ್ದ ನನಗೆ ತರಂಗದಿಂದ ಬರಹದ ಬದುಕು ಮೊದಲಾಯಿತು ಎಂದು ಪತ್ರಿಕೆ ಕಾರ್ಯನಿರ್ವಹಣೆ ಆರಂಭದ ದಿನಗಳ ಬಗ್ಗೆ ಸ್ಮರಿಸಿದರು. ಪ್ರಶಸ್ತಿ ಪ್ರಾಯೋಜಕರಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ್ ಶೆಣೈ, ಪ್ರಭಾವತಿ ಶೆಣೈ ಅವರ ಸಮಾಜಮುಖಿ ಚಿಂತನೆಯನ್ನು ಅವರು ಶ್ಲಾಘಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅಭಿನಂದನ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜು ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಪುರಸ್ಕಾರ ಸಮಿತಿಯ ಸಂಚಾಲಕ ಮರವಂತೆ ನಾಗರಾಜ್ ಹೆಬ್ಬಾರ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್ ಉಪಸ್ಥಿತರಿದ್ದರು.
ಸಂಚಾಲಕ ರವಿರಾಜ್ ಎಚ್. ಪಿ. ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕೊಡವೂರು ಅಭಿನಂದನ ಪತ್ರ ವಾಚಿಸಿದರು. ಸಂಧ್ಯಾ ಶೆಣೈ ವಂದಿಸಿದರು. ಶಿಲ್ಪಾ ಜೋಷಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಗಿಲಿಗಿಲಿ ಮ್ಯಾಜಿಕ್ ತಂಡದಿಂದ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮಧ್ಯೆ ಜಾದೂ ಪ್ರದರ್ಶನ ನೆರವೇರಿತು.