ಉಡುಪಿ: ಬ್ರಹ್ಮಾವರ ಠಾಣಾ ವ್ಯಾಪ್ತಿಯ ನಡೂರಿನ ಪ್ರಾಥಮಿಕ ಶಾಲೆಯ ಆವರಣದೊಳಗೆ ನುಗ್ಗಿ ಭಯದ ವಾತಾವರಣ ನಿರ್ಮಿಸಿದ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ವಶಕ್ಕೆ ಪಡೆದ ಘಟನೆ ಶುಕ್ರವಾರ ನಡೆದಿದೆ. ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಬೊಬ್ಬೆ ಹೊಡೆಯುತ್ತಾ ಕಬ್ಬಿಣದ ಸಲಾಕೆ ಹಿಡಿದು ಶಾಲಾ ವಠಾರಕ್ಕೆ ನುಗ್ಗಿದಾಗ ಬೆದರಿದ ಮಕ್ಕಳು ಭೀತಿಗೊಳಗಾದರು. ಶಾಲಾ ಸಿಬ್ಬಂದಿಗಳು ಮಹಿಳೆಯಿಂದ ತೊಂದರೆಯಾಗದಂತೆ ತಡೆಯಲು ಹರಸಾಹಸ ಪಟ್ಟಿದ್ದಾರೆ.
ಮಹಿಳೆಯು ಸ್ಥಳೀಯ ನಿವಾಸಿಯಾಗಿದ್ದು ವಿವಾಹಿತರಾಗಿದ್ದಾರೆ. ಒಂದು ಮಗುವಿದೆ. ಪತಿ ಬೇರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಿರುವ ಮಹಿಳೆಗೆ ಸೂಕ್ತ ಔಷದೋಪಚಾರ ನಡೆಸಲು ತೀರಾ ಬಡತನದಲ್ಲಿರುವ ವೃದ್ಧ ತಂದೆ ತಾಯಿಗೆ ಸಾಧ್ಯವಾಗಿಲ್ಲ. ಹೀಗಾಗಿ ಮಹಿಳೆಯ ಅನಾರೋಗ್ಯ ಉಲ್ಬಣಗೊಂಡಿದೆ. ಮಗುವಿನ ಭವಿಷ್ಯದ ದೃಷ್ಟಿಯಿಂದ ಮಹಿಳೆ ಗುಣಮುಖವಾಗುವುದು ಅತ್ಯಗತ್ಯವಾಗಿದೆ. ಸೂಕ್ತ ಔಷದೋಪಾಚಾರದೊಡನೆ ಆರೈಕೆಯ ಅಗತ್ಯವೂ ಇದೆ. ಆದರೆ ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ಇವೆಲ್ಲವನ್ನೂ ಭರಿಸುವ ಶಕ್ತಿಯಿಲ್ಲ. ಹೀಗಾಗಿ ಸಂಬಂಧಪಟ್ಟವರು ಹಾಗೂ ಸಂಬಂಧಪಟ್ಟ ಇಲಾಖೆಗಳು ಮಹಿಳೆಯ ನೆರವಿಗೆ ಮುಂದಾಗಬೇಕು ಎಂದು ವಿಶು ಶೆಟ್ಟಿ ಮನವಿ ಮಾಡಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ಉಡುಪಿ ಸಖಿ ಸೆಂಟರ್‌ನ ಸಿಬ್ಬಂದಿಗಳು ವಿಶು ಶೆಟ್ಟಿ ಅವರೊಂದಿಗೆ ಸಹಕರಿಸಿದರು.