ಕೋಟ: ಕೃಷಿ ಕಾಯಕದಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಸಾಮಾಜ ಸೇವಕಿ ಮಣೂರು ಭಾರತಿ ಮಯ್ಯ ಹೇಳಿದರು. ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೆಳೆಯರ ಬಳಗ ಕಾರ್ಕಡ, ರೈತಧ್ವನಿ ಸಂಘ ಕೋಟ, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಸರಣಿ ೨೧ನೇ ಮಾಲಿಕೆ ಕಾರ್ಯಕ್ರಮದಲ್ಲಿ ಮಣೂರು ಪರಿಸರದ ಯುವ ಕೃಷಿಕ ರೂಪೇಶ್ ಶೆಟ್ಟಿಯವರನ್ನು ಸನ್ಮಾನಿಸುವ ಸಮಾರಂಭದಲ್ಲಿ ಅವರು ಮಾತನಾಡಿದರು.
ನಾವು ಎಲ್ಲೇ ವಾಸ್ತವ್ಯ ಇದ್ದರೂ ರೈತ ಬೆಳೆದ ಆಹಾರವನ್ನೇ ಸೇವಿಸಬೇಕು. ಅಂತಹ ರೈತನಿಗೆ ಗೌರವ ನೀಡಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಈ ನಿಟ್ಟಿನಲ್ಲಿ ಪಂಚವರ್ಣ ಸಂಸ್ಥೆಯ ಕಾರ್ಯ ಶ್ಲಾಘನೀಯ. ನಿರಂತರ ಸಾಮಾಜಿಕ ಕಾರ್ಯದಲ್ಲಿ ನಿರತವಾದ ಈ ಸಂಸ್ಥೆಯ ಸೇವೆ ಇನ್ನಷ್ಟು ವಿಸ್ತರಿಸಲಿ ಎಂದರು.
ಕೃಷಿ ಉಳಿಯಬೇಕಾದರೆ ಯುವ ಸಮೂಹ ಕೃಷಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಪಳಗಬೇಕು. ಕೃಷಿ ಇದ್ದರೆ ಮಾತ್ರ ನಮ್ಮ ಉಸಿರು ಇರಲು ಸಾಧ್ಯ. ಆ ಮೂಲಕ ಕೃಷಿ ಕ್ಷೇತ್ರವನ್ನು ಗಟ್ಟಿಗೊಳಿಸವಂತಾಗಬೇಕು. ಸರಕಾರ ಕೃಷಿಗೆ ಹೆಚ್ಚಿನ ಉತ್ತೇಜನ ನೀಡಿ ಇದನ್ನು ಮುಂದಿನ ತಲೆಮಾರಿಗೆ ಕೊಂಡ್ಯೊಯುವಂತೆ ಮಾಡಬೇಕು ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಣೂರು ಭಾಸ್ಕರ ಶೆಟ್ಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯುವ ಕೃಷಿಕ ರೂಪೇಶ್ ಶೆಟ್ಟಿ ಮಣೂರು ಇವರನ್ನು ಕೃಷಿ ಪರಿಕರದೊಂದಿಗೆ ಗೌರವಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೋಟ ಗ್ರಾಮ ಪಂಚಾಯತ್ ಸದಸ್ಯ ಶಿವರಾಮ ಶೆಟ್ಟಿ, ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ ಜಯರಾಮ ಶೆಟ್ಟಿ, ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಪಂಚವರ್ಣ ಯುವಕ ಮಂಡಲದ ಸ್ಥಾಪಕಾಧ್ಯಕ್ಷ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ವಸಂತಿ ಪೂಜಾರಿ, ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್ಯ ಉಪಸ್ಥಿತರಿದ್ದರು.
ಪಂಚವರ್ಣದ ಉಪಾಧ್ಯಕ್ಷ ಮನೋಹರ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸದಸ್ಯೆ ಸುಜಾತ ಬಾಯರಿ ನಿರೂಪಿಸಿದರು. ಪಂಚವರ್ಣ ಉಪಾಧ್ಯಕ್ಷ ರವೀಂದ್ರ ಜೋಗಿ ವಂದಿಸಿದರು. ಕಾರ್ಯಕ್ರಮವನ್ಮು ಪಂಚವರ್ಣದ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.