ಮನೆಯ ಕಿಟಕಿ ತೆರೆದಿದ್ದರೆ ಮನೆಯ ಒಳಗೆ ಬೆಳಕು, ಗಾಳಿ ಸಂಚಾರ ಆಗುತ್ತದೆ. ಪೇಟೆಯ ಮನೆಗಳಲ್ಲಿ ಎಲ್ಲಾ ಹೊತ್ತಿನಲ್ಲೂ ಮನೆಯ ಕಿಟಕಿ ತೆಗೆದಿಡುವುದು ಕೂಡಾ ಸಮಸ್ಯೆಯೇ. ಕಿಟಕಿ ಬಾಗಿಲು ತೆರೆದಿಟ್ಟರೆ ನೆತ್ತರು ಹೀರಲು ಬರುವ ಸೊಳ್ಳೆಗಳ ಕಾಟ ಜೊತೆಗೆ ಅವುಗಳಿಂದ ಹರಡುವ ಮಾರಣಾಂತಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಇವುಗಳ ಭಯ. ಮತ್ತೆ ಕಿಟಕಿ ಕಳ್ಳರ ಕಾಟವೂ ಇಲ್ಲವೆಂದಲ್ಲ.
ಕೆಲವು ವರ್ಷಗಳ ಹಿಂದೆ ನಮ್ಮ ಬಡಾವಣೆ ಹಾಗೂ ಅದರ ಸುತ್ತಮುತ್ತ ಕಿಟಕಿ ಕಳ್ಳರ ಉಪಟಳ ಅತಿಯಾಗಿತ್ತು. ಬಹುಶಃ ಎಲ್ಲಾ ಮನೆಗಳವರಿಗೂ ಆ ಅನುಭವ ಆಗಿತ್ತು. ರಾತ್ರಿಯಲ್ಲಿ ಸರದಿ ಪ್ರಕಾರ ಪ್ರತಿಯೊಂದು ಮನೆಯವರು ಎಚ್ಚರವಿದ್ದು, ಎಲ್ಲಿಯಾದರೂ ಕಳ್ಳ ನುಗ್ಗಿದರೆ ಕೂಡಲೇ ಇಡಿ ಬಡಾವಣೆಯವರು ಜಾಗೃತರಾಗುವಂತಹ ಬೀಟ್ ವ್ಯವಸ್ಥೆ ಹಾಗೂ ಸಂಪರ್ಕ ವ್ಯವಸ್ಥೆ ಮಾಡಿದ ನಂತರ ಕಳ್ಳರ ಉಪದ್ರ ಕಡಿಮೆ ಆಗಿತ್ತು.
ಬಡಾವಣೆಯ ಎಲ್ಲರ ಸಹಕಾರದಿಂದ ಕೈಗೊಂಡ ಬೀಟ್ ವ್ಯವಸ್ಥೆ ರಾಜ್ಯಾದ್ಯಂತ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.
ಕಣ್ಣಿಗೆ ಕಾಣುವ ಕಿಟಕಿಯ ಕಥೆ ಹೀಗಾದರೆ ಕಣ್ಣಿಗೆ ಕಾಣದ ಅನೇಕ ಕಿಟಕಿಗಳಿವೆ. ಎಲ್ಲಾ ಕಿಟಕಿಗಳನ್ನೂ ನಿಯಂತ್ರಿಸುವ ದೊಡ್ಡ ಕಿಟಕಿ ನಮ್ಮ ಮನಸ್ಸು.
ಮನದ ಕಿಟಕಿಯನ್ನು ಬೇಕೆಂದಾಗ ತೆರೆಯಬೇಕಾಗುವುದು. ಹಾಗೆಯೇ ಕೆಲವೊಮ್ಮ ಮುಚ್ಚಬೇಕಾದ ಅನಿವಾರ್ಯತೆಯೂ ಇದೆ. ಗಾಂಧಿತಾತನ ಮೂರು ಕೋತಿಗಳಂತೆ “ಕೆಟ್ಟದ್ದನ್ನು ನೋಡಲಾರೆ, ಕೆಟ್ಟದ್ದನ್ನು ಕೇಳಲಾರೆ, ಕೆಟ್ಟದ್ದನ್ನು ಆಡಲಾರೆ” ಅಂತ ನಿರ್ಧರಿಸಿದಾಗ ಸಂಬಂಧಪಟ್ಟ ಕಿಟಕಿಯನ್ನು ಮುಚ್ಚಬೇಕಾಗುತ್ತದೆ.
ಬದಲಾವಣೆಯ ಗಾಳಿಗೆ ಒಗ್ಗಿಕೊಳ್ಳಬೇಕಾದರೆ ವಿಶಾಲ ಮನೋಭಾವನೆ ಬೇಕಾಗುತ್ತದೆ. ಸಂಕುಚಿತ ಮನೋಭಾವದ ಕಿಟಕಿಯನ್ನು ಪೂರ್ತಿ ತೆರೆಯಬೇಕಾಗುತ್ತದೆ. ಎಷ್ಟೋ ಬಾರಿ, ಹೆಚ್ಚಿನವರು ತಮ್ಮ ಸುತ್ತ ಒಂದು ಬೇಲಿಯನ್ನು ಹಾಕಿಕೊಳ್ಳುತ್ತಾರೆ. ಬೇಲಿಯ ಹೊರಗೆ ಬರಲು ಮನದ ಕಿಟಕಿ ತೆರೆದರೆ ಮಾತ್ರ ಸಾಧ್ಯ.
ಸತತ ಸೋಲಿನಿಂದ ಕಂಗೆಟ್ಟವನು ಗೆಲುವಿನ ಕಡೆಗೆ ಸಾಗಬೇಕಾದರೆ ಮನಸ್ಸೆಂಬ ಕಿಟಕಿ ತೆರೆದು ಆತ್ಮವಿಶ್ವಾಸವೆಂಬ ಶುದ್ಧ ಆಮ್ಲಜನಕವನ್ನು ಉಸಿರಾಡಿದರೆ ಮಾತ್ರ ಯಶಸ್ಸು ಸಿಗಬಹುದು. ನಾನು ಹೀಗೆಯೇ ಇದ್ದದ್ದು, ಹೀಗೆಯೇ ಇದ್ದೇನೆ, ಇನ್ನು ಮುಂದೆಯೂ ಹೀಗೇ ಇರುವುದು ಅಂತ ಯಾವುದೇ ಹೊಸ ಬದಲಾವಣೆಗೆ ಒಗ್ಗಿಕೊಳ್ಳದಿದ್ದರೆ, ಹೊಸ ವಿಷಯ ಅರಿತುಕೊಳ್ಳದಿದ್ದರೆ, ನನಗೆಲ್ಲಾ ಗೊತ್ತಿದೆ ಅಂದುಕೊಂಡರೆ, ನಾನೇ ಶ್ರೇಷ್ಠ ಅಂತ ಅಹಂ ತೋರಿಸುತ್ತಿದ್ದರೆ, ತಪ್ಪು ಮಾಡಿದರೂ ತಾನು ಮಾಡಿದ್ದು ಸರಿಯಾಗಿಯೇ ಇದೆ ಅಂತ ವಾದಿಸಿದರೆ ಆ ಮನುಷ್ಯ ಎಂದಿಗೂ ಬೆಳೆಯಲಾರ.
ಮನೆಯ ಕಿಟಕಿ ತೆರೆಯದಿದ್ದರೆ ಮನೆಯ ಒಳಗೆ ಹೇಗೆ ಗಬ್ಬು ವಾಸನೆ ಬರುತ್ತದೆಯೋ, ಅದೇ ತರಹ ಮನಸ್ಸು ಗಬ್ಬು ನಾರುತ್ತದೆ. ಆಗ ನಷ್ಟ ಅವನಿಗೇ. ಪುರಂದರದಾಸರ ಕೀರ್ತನೆ ಒಂದು ನೆನಪಿಗೆ ಬರುತ್ತಿದೆ. “ಕದವನಿಕ್ಕಿದಳೇಕೋ ಗಯ್ಯಾಳಿ ಮೂಳೀ ಕದವನಿಕ್ಕಿದಳೇಕೋ… ಕದವನಿಕ್ಕಿದಳೇಕೋ ಚಿಲಕವಲ್ಲಾಡುತಿದೆ ಒಳಗಿದ್ದ ಪಾಪವು ಹೊರಗೆ ಹೋದೀತೆಂದು…. ಭಾರತ ರಾಮಾಯಣ, ಪಂಚ ರಥಾಗಮ ಸಾರತತ್ವದ ಬಿಂದು ಒಳಗೆ ಬಿದ್ದೀತೆಂದು.
ಮನದೊಳಗೆ ಇರುವ ಕೆಟ್ಟ ಗುಣಗಳು ಹೊರಗೆ ಹೋಗದಿದ್ದರೆ ಹಾಗೆಯೇ ಒಳ್ಳೆ ವಿಷಯಗಳು ಒಳಗೆ ಬಾರದಿದ್ದರೆ, ಆಕೆ ಗಯ್ಯಾಳಿಯಾಗಿಯೇ ಉಳಿಯಬೇಕಾಗುತ್ತದೆ. ಎಂತಹಾ ಉನ್ನತ ವಿಚಾರ! ವ್ಯಕ್ತಿತ್ವ ವಿಕಸನವಾಗಲು ಅಗತ್ಯವಿರುವ ವಿಚಾರಧಾರೆಗಳಿಗೆ ಮನದ ಕಿಟಕಿಯನ್ನು ಸಂಪೂರ್ಣವಾಗಿ ತೆರೆದಿಡೋಣ, ಆಗದೇ?
– ಡಾ. ಕೃಷ್ಣಪ್ರಭ ಎಂ