ಬಂಟ್ವಾಳ: ಯುವಕ ಮಂಡಲ (ರಿ.) ಇರಾ ಇದರ 49ನೇ ವಾರ್ಷಿಕೋತ್ಸವ ಯುವಕ ಮಂಡಲದ ರಂಗಮಂದಿರದಲ್ಲಿ ನಡೆಯಿತು.
ಮಧ್ಯಾಹ್ನ 3.30 ಕ್ಕೆ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮೇಳದ ದೇವರ ಮೆರವಣಿಗೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು, ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟದೊಂದಿಗೆ ಸಂಪನ್ನವಾಯಿತು.
ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅನನ್ಯ ಫೀಡ್ಸ್ ಹುಬ್ಬಳ್ಳಿ ಮಾಲಕರಾದ ದಿವಾಣ ಗೋವಿಂದ ಭಟ್ ಮಾತನಾಡಿ, ಯಕ್ಷಗಾನ ಮತ್ತು ಇರಾಗೆ ಇರುವ ಅವಿನಾಭಾವ ಸಂಬಂಧದ ಕುರಿತು ವಿಸ್ತೃತವಾಗಿ ಮಾತನಾಡಿದರು.
ಶ್ರೀ ಗಣೇಶ್ ಮೆಡಿಕಲ್ಸ್ ಕಲ್ಲಡ್ಕ ಮಾಲಕ ಚಂದ್ರಶೇಖರ ರೈ ಕೊಲ್ಯ, ಯಕ್ಷಗಾನಕ್ಕೂ ಹಾಗೂ ಯುವಕ ಮಂಡಲಕ್ಕೂ ಇರುವ ನಂಟಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯತ್ ನ ನಿಕಟಪೂರ್ವ ಅಧ್ಯಕ್ಷರಾದ ಚಂದ್ರಹಾಸ ಆರ್ ಕರ್ಕೇರ ಮಾತನಾಡಿ, ಯುವಕ ಮಂಡಲದ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪ್ರಸ್ತುತ ಕಟೀಲು ಮೇಳದ ಪ್ರಬಂಧಕರಾದ ಶ್ರೀಧರ ಪೂಜಾರಿ ಪಂಜಾಜೆ ಇವರನ್ನು ಸನ್ಮಾನಿಸಲಾಯಿತು.
ಯುವಕ ಮಂಡಲದ ಸ್ಥಾಪಕ ಸದಸ್ಯರಾದ ಗೋಪಾಲ ಮಾಸ್ಟರ್ ಕುಂಡಾವು, ಜನಾರ್ಧನ ಪಕ್ಕಳ ತಾಳಿತ್ತಬೆಟ್ಟು ಇವರನ್ನು ಗೌರವಿಸಲಾಯಿತು.
ಅತೀ ಹೆಚ್ಚು ಅಂಕ ಗಳಿಸಿದ ಊರಿನ ವಿದ್ಯಾರ್ಥಿಗಳಿಗೆ ಪ್ರೊತ್ಸಾಹಧನ ನೀಡಲಾಯಿತು.
ಸಂಘದ ಸದಸ್ಯರಾದ ಸ್ಟೀವನ್ ಡಿಸಿಲ್ವ ದೈವದಹಿತ್ಲು, ಅದ್ರಾಮ ಡಿ ಇವರನ್ನು ಗೌರವಿಸಲಾಯಿತು.
ಉದ್ಯಮಿ ಜಗದೀಶ ಆಳ್ವ ನಾರ್ಯಗುತ್ತು, ಯುವಕ ಮಂಡಲದ ಅಧ್ಯಕ್ಷರಾದ ಅಶ್ವಿತ್ ಕೊಟ್ಟಾರಿ ಇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಭರತ್ ರಾಜ್ ರೈ ಸಂಘದ ವಾರ್ಷಿಕ ವರದಿ ವಾಚಿಸಿದರು. ಪುಷ್ಪರಾಜ್ ಕುಕ್ಕಾಜೆ ಸನ್ಮಾನಿತರನ್ನು ಪರಿಚಯಿಸಿದರು.
ನಿತೇಶ್ ಶೆಟ್ಟಿ ಸಂಪಿಲ ವಂದಿಸಿದರು. ಯತಿರಾಜ್ ಶೆಟ್ಟಿ ಸಂಪಿಲ ಕಾರ್ಯಕ್ರಮ ನಿರೂಪಿಸಿದರು.