ಬೆಂಗಳೂರು: ಕೆ.ಎಸ್.ಆರ್.ಟಿ.ಸಿ- ನೂತನ ಎಲೆಕ್ಟ್ರಿಕ್ ಬಸ್ ಪ್ರಾರಂಭವಾಗಿದೆ. ಮೊದಲ ಎಲೆಕ್ಟ್ರಿಕ್ ಬಸ್ಸಿನ ಪರೀಕ್ಷಾರ್ಥ ಸಂಚಾರ ಶೀಘ್ರದಲ್ಲಿಯೇ ಆರಂಭವಾಗಲಿದೆ. ಜನವರಿ-ಫೆಬ್ರವರಿ ವೇಳೆಗೆ ಸುಮಾರು ೫೦ ಎಲೆಕ್ಟ್ರಿಕ್ ಬಸ್ಗಳು ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. 12 ಮೀ ಇ-ಬಸ್ ಅನ್ನು ಖಾಸಗಿ ಕಂಪನಿ ಒಲೆಕ್ಟ್ರಾ ಒಟ್ಟು ವೆಚ್ಚದ ಗುತ್ತಿಗೆ ಆಧಾರದ ಮೇಲೆ ನಿರ್ವಹಿಸುತ್ತದೆ. ಎಸಿ ಬಸ್ 43 ಪುಶ್-ಬ್ಯಾಕ್ ಸೀಟ್ಗಳನ್ನು ಹೊಂದಿದೆ. ಆನ್ಬೋರ್ಡ್ ಮತ್ತು ಆಫ್ಬೋರ್ಡ್ ಚಾರ್ಜಿಂಗ್ ಸೌಲಭ್ಯಗಳೊಂದಿಗೆ ಒಂದೇ ಚಾರ್ಜ್ನಲ್ಲಿ 300 ಕಿಮೀ ವರೆಗೆ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದೆ.
ಎಲೆಕ್ಟ್ರಿಕ್ ಬಸ್ ಪ್ರಾರಂಭದ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ಕೇಂದ್ರ ಸರ್ಕಾರದ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಯೋಜನೆಯಡಿಯಲ್ಲಿ ಕೆಎಸ್ಆರ್ಟಿಸಿಗೆ ಎಲೆಕ್ಟ್ರಿಕ್ ಬಸ್ಗಳನ್ನು ಸೇರ್ಪಡೆಗೊಳಿಸಲಾಗುತ್ತಿದ್ದು, ಮಾಲಿನ್ಯವನ್ನು ತಡೆಗಟ್ಟುವ ಗುರಿಯನ್ನು ಈ ಯೋಜನೆ ಹೊಂದಿದ್ದು ಇದೊಂದು ಉತ್ತಮ ಬೆಳವಣಿಗೆಯಾಗಿದೆ. 2030 ರ ವೇಳೆಗೆ ಎಲ್ಲಾ ಬಸ್ ಗಳನ್ನು ಸಂಪೂರ್ಣ ಎಲೆಕ್ಟ್ರಿಕ್ ಬಸ್ ಗಳಾಗಿ ಪರಿವರ್ತಿಸುವ ಯೋಜನೆ ಸರ್ಕಾರದ ಮುಂದಿದೆ ಎಂದು ತಿಳಿಸಿದ್ದಾರೆ.
ಎಲ್ಲೆಲ್ಲಿ ಸಂಚಾರ? ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಎಲೆಕ್ಟ್ರಿಕ್ ಬಸ್ಗಳ ಸಂಚಾರ ಆರಂಭವಾಗಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ಎಲೆಕ್ಟ್ರಿಕ್ ಬಸ್ ಬ್ಯಾಟರಿ ಚಾರ್ಜ್ ಮಾಡಲು ಈಗಾಗಲೇ ಚಾರ್ಜಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶೀಘ್ರದಲ್ಲಿಯೇ ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗದಲ್ಲಿ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.