ಕೋಟೇಶ್ವರ: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಜನೆಯನ್ನು ಕೇವಲ ಪಠ್ಯಕ್ರಮಗಳಿಗಷ್ಟೇ ಸೀಮಿತಗೊಳಿಸದೆ, ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಇರುವ ಅವಕಾಶಗಳ ಬಗ್ಗೆ ತಿಳಿದುಕೊಂಡು, ಪೂರ್ವಸಿದ್ದತೆಯೊಂದಿಗೆ ಪರೀಕ್ಷೆಗಳನ್ನು ಎದುರಿಸಿದರೆ ಯಶಸ್ಸನ್ನು ಗಳಿಸಲು ಸಾಧ್ಯ ಎಂದು ಲಕ್ಷ್ಮೀ ಸೋಮ ಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಸಹಾಯಕ ಪ್ರಾಧ್ಯಾಪಕ ಮನೋಹರ ಉಪ್ಪುಂದ ಹೇಳಿದರು.
ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕುಂದಾಪುರ ಇಲ್ಲಿ ನಡೆದ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ-ಜೆ ಆರ್ ಎಫ್/ಎನ್ ಇ ಟಿ/ಕೆ-ಸೆಟ್ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳು ಎನ್ನುವ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಆಧ್ಯಕ್ಷತೆಯನ್ನು ಪ್ರಭಾರ ಪ್ರಾಚಾರ‍್ಯರಾದ ಪ್ರೊ. ರಾಮರಾಯ ಆಚಾರ್ಯ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ದಿಸೆಯಲ್ಲಿಯೇ ಮುಂದಿನ ಗುರಿಯನ್ನು ನಿಶ್ಚಯಿಸಿಕೊಂಡು ಸತತ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಚಾಲಕರಾದ ನಾಗರಾಜ ಯು., ಸ್ನಾತಕೋತ್ತರ ವಿಭಾಗದ ಸಂಚಾಲಕರಾದ ಸಂತೋಷ ನಾಯ್ಕ ಹೆಚ್., ಗ್ರಂಥಾಲಯ ಸಲಹಾ ಸಮಿತಿಯ ವಿದ್ಯಾರ್ಥಿ ಪ್ರತಿನಿಧಿಗಳಾದ ಪರಮೇಶ್ವರ ನಾಯ್ಕ ಹಾಗೂ ಸುಷ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂಘಟಿಸಿದ ಕಾಲೇಜಿನ ಗ್ರಂಥಪಾಲಕರಾದ ವೆಟರನ್ ರವಿಚಂದ್ರ ಹೆಚ್. ಎಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತೇಜಸ್ವಿನಿ ಜೋಷಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಶ್ರದ್ಧಾ ವಂದಿಸಿದರು.