ಕೋಟ: ವಡ್ಡರಸ ಮಹಾರಾಜ ವಿರಾಜಮಾನವಾಗಿ ಆಳ್ವಿಕೆ ನಡೆಸಿದ ಗ್ರಾಮೀಣ ಭಾಗವಾದ ವಡ್ಡರ್ಸೆ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಪಸರಿಸಿ ಅದೆಷ್ಟೋ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿದ ಸರಕಾರಿ ಪ್ರೌಢಶಾಲೆಗೆ ಇದೀಗ ಇಪ್ಪತ್ತೈದರ ಸಂಭ್ರಮ.
ಈ ಹಿನ್ನಲೆಯಲ್ಲಿ ರಜತ ಪರ್ವ ಕಾರ್ಯಕ್ರಮದ ಮೂಲಕ ಡಿಸೆಂಬರ್ 30 ರಂದು ಆಚರಿಸಿಕೊಳ್ಳುತ್ತಿದೆ. ರಜತ ಮಹೋತ್ಸವ ಸಮಿತಿಯ ನೇತೃತ್ವದಲ್ಲಿ ಹಳೆ ವಿದ್ಯಾರ್ಥಿ ಸಂಘಟನೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಶಾಲಾ ಶಿಕ್ಷಕರು ಪೋಷಕರು ವಿದ್ಯಾಭಿಮಾನಿಗಳು, ದಾನಿಗಳ ಸಹಕಾರ ಹಾಗೂ ನೆರವಿನೊಂದಿಗೆ ಅದ್ದೂರಿಯ ಕಾರ್ಯಕ್ರಮ ಜರುಗಲಿದೆ.
ಪೂರ್ವಾಹ್ನ ಘಂಟೆ 8:30ಕ್ಕೆ ವಿಶೇಷ ಪುರ ಮೆರವಣಿಗೆಯೊಂದಿಗೆ ರಜತ ಮಹೋತ್ಸವ ಕಾರ್ಯಕ್ರಮವು ಅನಾವರಣಗೊಳ್ಳಲಿದೆ. ನಂತರ ಘಂಟೆ 9:00ಕ್ಕೆ ಧ್ವಜಾರೋಹಣ, 9:30ಕ್ಕೆ ಬಹುಮಾನ ವಿತರಣೆ ನಡೆಯಲಿದೆ.
ಸಂಜೆ ಘಂಟೆ 5:00 ರಿಂದ ಸ್ಥಳೀಯ ಅಂಗನವಾಡಿ ಮಕ್ಕಳಿಂದ ನೃತ್ಯ ಸಿಂಚನ ಕಾರ್ಯಕ್ರಮ ತದನಂತರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡ್ಡರ್ಸೆ ಹಾಗೂ ವಿವೇಕಾನಂದ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಧುವನ ವಿದ್ಯಾರ್ಥಿಗಳಿಂದ ನಾಟ್ಯ ಸಂಭ್ರಮ, ಸಂಜೆ 6:30 ರಿಂದ ಸಭಾ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ, ದತ್ತಿನಿಧಿ ವಿತರಣೆ, ಗುರುವಂದನೆ ಕಾರ್ಯಕ್ರಮವು ಜರುಗಲಿದೆ.
ಈ ಕಾರ್ಯಕ್ರಮದಲ್ಲಿ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ದಾನಿಗಳು, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಶಾಲೆಗೆ ಕೊಡುಗೆಯಾಗಿ ಶ್ರೀ ಶಂಕರನಾರಾಯಣ ಕನ್ಸ್ಟ್ರಕ್ಷನ್ಸ್ ಪ್ರೈ ಲಿಮಿಟೆಡ್ ಬೆಂಗಳೂರು ನೀಡಿದ ಶಾಲಾ ವಾಹನ ‘ಅಕ್ಷರ ಅಂಬಾರಿ’ ಉದ್ಘಾಟನೆ ಹಾಗೂ ಶಾಲೆಗೆ ನೀಡಲಾದ ಸಿ.ಸಿ. ಕ್ಯಾಮರದ ಉದ್ಘಾಟನೆಯು ನಡೆಯಲಿದೆ.
ರಾತ್ರಿ 8:30 ರಿಂದ ಪೌಢಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಡಾನ್ಸ್ ಮೆರಗು, ನಾಟಕ, ಯಕ್ಷಗಾನ ಹಾಗೂ ಹಳೆ ವಿದ್ಯಾರ್ಥಿಗಳಿಂದ ಕುಂದಾಪ್ರ ಕನ್ನಡದಲ್ಲಿ ನಗುವಿನ ಚಿತ್ತಾರ ನಾಟಕವು ಪ್ರಸ್ತುತಿಯಾಗಲಿದೆ.
ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ವಿಜಯಕುಮಾರ್ ಶೆಟ್ಟಿ ಕೊತ್ತಾಡಿ, ಗೌರವಾಧ್ಯಕ್ಷರಾದ ಭೋಜ ಹೆಗ್ಡೆ, ಸಂಸ್ಥೆಯ ಮುಖ್ಯ ಶಿಕ್ಷಕಿ ಗಾಯತ್ರಿದೇವಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ಶೆಟ್ಟಿ ಯಾಳಹಕ್ಲು, ಕಾರ್ಯಕ್ರಮ ನಿರ್ವಹಣೆಯನ್ನು ಮಾಡಲಿದ್ದಾರೆ.