ಉಡುಪಿ: ಸರ್ಕಾರಿ ಪದವಿಪೂರ್ವ ಕಾಲೇಜು ಸಾಣೂರು ಇಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಯುವಕ ಮಂಡಲ (ರಿ). ಸಾಣೂರು ಇವರ ಸಹಭಾಗಿತ್ವದಲ್ಲಿ ಕಾಲೇಜಿನ ಮುದ್ದಣ ರಂಗಮಂದಿರದಲ್ಲಿ ನಡೆಯಿತು.
ಪ್ರಾಂಶುಪಾಲರಾದ ಸುಚೇತಾ ಕಾಮತ್ ಕಾಲೇಜಿನ ವರದಿ ಮಂಡಿಸಿದರು. ದಿಕ್ಸೂಚಿ ಭಾಷಣವನ್ನು ಮಾಡಿದ ಕೆ.ಎಂ.ಎಫ್ ನಿರ್ದೇಶಕ ಸಾಣೂರು ನರಸಿಂಹ ಕಾಮತ್, 5ಜಿ ಯ ಜೊತೆಗೆ ಮಾತಾಜಿ, ಪಿತಾಜಿಯವರನ್ನು ಮರೆಯಬಾರದು. ಒಳ್ಳೆಯ ಸಂಸ್ಕಾರವನ್ನು ವಿದ್ಯಾರ್ಥಿಗಳು ಬೆಳೆಸಬೇಕೆಂದು ಕರೆ ನೀಡಿದರು.
ಕಾಲೇಜಿನ ಭೌತಶಾಸ್ತ್ರ ಪ್ರಯೋಗಾಲಯಕ್ಕೆ ದೇಣಿಗೆ ನೀಡಿದ ಅಮೆರಿಕಾದಲ್ಲಿ ವಿಜ್ಞಾನಿಯಾಗಿರುವ ಡಾ. ಜಿತೇಂದ್ರ ಕಿಣಿ ಬೈಲೂರು ಇವರನ್ನು ಸನ್ಮಾನಿಸಲಾಯಿತು. ಕಾಲೇಜಿನ ಹಸ್ತಪ್ರತಿ ವಾರ್ಷಿಕ ವಿಶೇಷಾಂಕ ‘ಪ್ರೇರಣಾ’ವನ್ನು ಅನಾವರಣಗೊಳಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕಿ ಪೂರ್ಣಿಮಾ, ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಕನ್ನಡ ಮತ್ತು ಸಂಸ್ಕೃತಿಯ ಸೊಗಡನ್ನು ಉಳಿಸಿ ಬೆಳೆಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕರುಣಾಕರ ಕೋಟ್ಯಾನ್, ಸಾಣೂರು ಯುವಕ ಮಂಡಲದ ಅಧ್ಯಕ್ಷ ಪ್ರಸಾದ್ ಪೂಜಾರಿ, ಹಿರಿಯ ಶಿಕ್ಷಕರಾದ ಗಣೇಶ್ ಮೊಗವೀರ, ಎಸ್.ಡಿ.ಎಂ ಸಿಯ ಅಧ್ಯಕ್ಷ ಜನಾರ್ಧನ ಆಚಾರ್ಯ, ಕಾಲೇಜಿನ ಸಿಬಿಸಿ
ಸದಸ್ಯ ಡಾ. ಮೋಹನದಾಸ್ ಜಿ ಪ್ರಭು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಭಾರತ ಸಂಸ್ಕೃತಿ ಪ್ರತಿಷ್ಠಾನದಿಂದ ನಡೆಸಿದ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ್ ಶೆಟ್ಟಿ, ಕಾಲೇಜಿನ ಅಭಿವೃದ್ಧಿಗೆ ಸಹಕರಿಸಿದ ಸಚಿವರನ್ನು ಸ್ಮರಿಸಿದರು. ಉಪನ್ಯಾಸಕರು, ಗ್ರಾಮ ಪಂಚಾಯತ್ ಸದಸ್ಯರು, ಯುವಕ ಮಂಡಲದ ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಾಣೂರು ಯುವಕ ಮಂಡಲದ ಕಾರ್ಯದರ್ಶಿ ಮೋಹನ್ ಶೆಟ್ಟಿ ಸ್ವಾಗತಿಸಿ, ನರೇಶ್ ವಂದಿಸಿದರು. ಜಗದೀಶ್ ನಾಯಕ್ ಹಾಗೂ ಡಾ. ಸುಮತಿ ಪಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿಗಳಿಂದ ‘ಸಾಂಸ್ಕೃತಿಕ ವೈಭವ 2022’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.